ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಈಗಾಗಲೇ ಮತದಾನ ಶುರುವಾಗಿದೆ. ಚಳಿಯ ನಡುವೆಯೇ ಜನರು ಮತಗಟ್ಟೆಗೆ ಹಕ್ಕು ಚಲಾಯಿಸಲು ಆಗಮಿಸುತ್ತಿದ್ದಾರೆ. ದೆಹಲಿಯ ಎಲ್ಲಾ 70 ಸ್ಥಾನಗಳಿಗೂ ಇಂದು ಮತದಾನ ನಡೆಯುತ್ತಿದ್ದು, ಸುಮಾರು ಒಂದೂವರೆ ಕೋಟಿ ಮತದಾರರು ಮತ ಚಲಾಯಿಸಲು ಮುಂದಾಗಿದ್ದಾರೆ.
ಜಿದ್ದಾ ಜಿದ್ದಿನ ಕುರುಕ್ಷೇತ್ರವಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯ ವಿಧಾನಸಭೆಗೆ ಮತದಾನ ನಡೆಯುತ್ತಿದ್ದು, ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಗೆಲುವು ತಮ್ಮದೇ ಅಂತ ರಣಕಲಿಗಳು ಅಖಾಡಕ್ಕಿಳಿದಿದ್ದು, ಇವರೆಲ್ಲರ ರಾಜಕೀಯ ಭವಿಷ್ಯವನ್ನು ಇಂದು ಮತದಾರ ಬರೆಯಲಿದ್ದಾನೆ. 70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1.56 ಕೋಟಿ ಮತದಾರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಒಟ್ಟು 13766 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತದಾರ ಪ್ರಭುಗಳ ಮಾರ್ಕ್ಸ್ ಯಾರಿಗೆ?
ದೆಹಲಿ ಗದ್ದುಗೆಗಾಗಿ ಮತ್ತೊಮ್ಮೆ ಮಹಾಯುದ್ಧವೇ ನಡೆಯುತ್ತಿದೆ. ಅಧಿಕಾರ ಉಳಿಸಿಕೊಂಡು ಇತಿಹಾಸ ಸೃಷ್ಟಿಸಲು ಆಪ್ ರಣತಂತ್ರ ಹೆಣೆದಿದ್ರೆ, 10 ವರ್ಷಗಳ ಬಳಿಕ ಮತ್ತೆ ಸಿಎಂ ಗಾದಿಗೇರಲು ಕೈ ಪಡೆ ಹವಣಿಸ್ತಿದೆ. ಇತ್ತ 30 ವರ್ಷಗಳ ಬಳಿಕ ದೆಹಲಿ ಚುಕ್ಕಾಣಿ ಹಿಡಿಯಲು ಕೇಸರಿ ಪಾಳಯ ಕಸರತ್ತು ನಡೆಸ್ತಿದೆ. ಈಗಾಗಲೇ ಮೂರು ಪಕ್ಷಗಳು ಎಲ್ಲಾ ರೀತಿಯ ಪ್ರಚಾರ ಮುಗಿಸಿದ್ದು, ಇವರೆಲ್ಲರ ಸರ್ಕಸ್-ಪ್ರಯತ್ನಗಳಿಗೆ ಇಂದು ಮತದಾರ ಪ್ರಭು ಮಾರ್ಕ್ಸ್ ಕೊಡಲಿದ್ದಾನೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬರಲಿದೆ.
ಮತದಾನ ಬೆಳಿಗ್ಗೆ 7 ಗಂಟೆಗೆ ಶುರುವಾಗಿದ್ದು, ಸಂಜೆ 6 ಗಂಟೆ ತನಕ ನಡೆಯಲಿದೆ. ಇನ್ನು ದೆಹಲಿ ವಿಧಾನಸಭಾ ಚುನಾವಣೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯ ಗಡಿಗಳನ್ನು ಮುಚ್ಚಲಾಗಿದೆ. ಗಡಿ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾದ ತಪಾಸಣೆ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ದೆಹಲಿಯಲ್ಲಿ ವಾಹನಗಳ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಮತದಾನದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಭದ್ರತಾ ಪಡೆಗಳು ಪ್ರತಿ ಮೂಲೆ ಮೂಲೆಯಲ್ಲೂ ಕಣ್ಣಿಟ್ಟಿವೆ.
