ಯೋಗೀಶ್ ಗೌಡ ಹತ್ಯೆ ಕೇಸ್ – ವಿನಯ್ ಕುಲಕರ್ಣಿ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಆದೇಶ!

ಧಾರವಾಡ : ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಜಾಮೀನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌, ಇನ್ನೊಂದು ವಾರದಲ್ಲಿ ಸಿಬಿಐ ಮುಂದೆ ಶರಣಾಗುವಂತೆ ವಿನಯ್‌ ಕುಲಕರ್ಣಿಗೆ ಸೂಚನೆ ನೀಡಿದೆ. ಈ ಮೂಲಕ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು ಭೀತಿ ಶುರುವಾಗಿದೆ.

ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ ಕುಲಕರ್ಣಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ 2021ರ ಆಗಸ್ಟ್ 11ರಂದು ಸುಪ್ರೀಂಕೋರ್ಟ್​ ವಿನಯ್ ಕುಲಕರ್ಣಿಗೆ ಜಾಮೀನು ನೀಡಿತ್ತು. ಆದ್ರೆ, ಈ ಜಾಮೀನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್​ ಗೆ ಅರ್ಜಿ ಸಲ್ಲಿಸಿದ್ದು, ಸಾಕ್ಷಿಗಳಿಗೆ 1 ಲಕ್ಷ ಹಣದ ಆಮಿಷ ಒಡ್ಡಿರುವುದರಿಂದ ಜಾಮೀನು ರದ್ದಿಗೆ ಮನವಿ ಮಾಡಿತ್ತು. ಇದೀಗ ಸಿಬಿಐ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್​, ವಿನಯ್​ ಕುಲಕರ್ಣಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ? ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ತಮ್ಮ ಒಡೆತನದ ಜಿಮ್​ನಲ್ಲಿಯೇ ಜೂನ್ 15, 2016ರಲ್ಲಿ ಯೋಗೇಶ್​ ಗೌಡ ಅವರ ಕೊಲೆ ನಡೆದಿತ್ತು.  ಆಗ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಪ್ರಕರಣ ಸಂಬಂಧ ನವೆಂಬರ್ 5, 2020ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಕೊಲೆ ಸಂಬಂಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಬಂಧನದ ಬಳಿಕ ಹಲವು ಬಾರಿ ವಿನಯ್ ಕುಲಕರ್ಣಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಧಾರವಾಡ ಹೈಕೋರ್ಟ್​ ಜಾಮೀನು ನಿರಾಕರಿಸಿತ್ತು. ಬಳಿಕ ಪ್ರಕರಣವನ್ನು ಜನಪ್ರತಿನಿಧಿಗಳ ಕೋರ್ಟ್​ಗೆ ವರ್ಗಾಯಿಸುವಂತೆ ವಿನಯ್ ಮನವಿ ಮಾಡಿದ್ದರು. ಅಲ್ಲಿಯೂ ಜಾಮೀನು ಅರ್ಜಿ ವಜಾ ಅಗಿತ್ತು. ಕೊನೆಗೆ ಸುಪ್ರೀಂಕೋರ್ಟ್​ನಿಂದ ಆಗಸ್ಟ್​ 11ರಂದು ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಧಾರವಾಡಕ್ಕೆ ಬರಬಾರದು ಎಂದು ಷರತ್ತುವಿಧಿಸಿ ಸುಪ್ರೀಂಕೋರ್ಟ್​ ಜಾಮೀನು ನೀಡಿತ್ತು.

ಇದನ್ನೂ ಓದಿ : ಕಾಲ್ತುಳಿತ ಪ್ರಕರಣದಲ್ಲಿ ವಿರಾಟ್ ಕೊಹ್ಲಿಗೂ ಸಂಕಷ್ಟ – ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಯ್ತು ದೂರು!

Btv Kannada
Author: Btv Kannada

Read More