ಕಾವ್ಯಾ ಗೌಡ ಹಲ್ಲೆ ಕೇಸ್​​ಗೆ ಬಿಗ್ ಟ್ವಿಸ್ಟ್ – ನಟಿ ವಿರುದ್ಧ ಪ್ರೇಮಾ ಪ್ರತಿದೂರು… ಮಾಂಗಲ್ಯ ಸರ ಕಿತ್ತೆಸದ ಭವ್ಯಾ ಗೌಡ!

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಅವರ ಮೇಲಿನ ಹಲ್ಲೆ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ರಾಮಮೂರ್ತಿ ನಗರ ಪೊಲೀಸ್‌ ಠಾಣೆಗೆ ಇಂದು ದೂರು ನೀಡಿದ್ದ ಕಾವ್ಯಾ, ತನ್ನ ಮೇಲೆ ಹಾಗೂ ತನ್ನ ಪತಿ ಸೋಮ್‌ಶೇಖರ್‌ ಮೇಲೆ, ಅವರ ಸಹೋದರ ನಂದೀಶ್‌, ಆತನ ಪತ್ನಿ ಪ್ರೇಮಾ, ಆಕೆಯ ತಂದೆ ರವಿಕುಮಾರ್‌ ಹಾಗೂ ತಂಗಿ ಪ್ರಿಯಾ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಅಲ್ಲದೆ, ರವಿಕುಮಾರ್‌ ತನಗೆ ಅತ್ಯಾಚಾರ ಮಾಡುವ ಬೆದರಿಕೆಯನ್ನೂ ಹಾಕಿದ್ದಾನೆ ಎಂದಿದ್ದರು. ಇದೀಗ ಈ ಪ್ರಕರಣದಲ್ಲಿ ಪ್ರೇಮಾ ಅವರು ಪ್ರತಿದೂರು ಸಲ್ಲಿಕೆ ಮಾಡಿದ್ದಾರೆ.

ಕಾವ್ಯಾ ಗೌಡ ಮಾತ್ರವಲ್ಲದೆ, ಅವರ ಪತಿ ಸೋಮ್‌ಶೇಖರ್‌ ಹಾಗೂ ಕಾವ್ಯಾ ಅವರ ಅಕ್ಕ ಭವ್ಯಾ ಗೌಡ ವಿರುದ್ಧ ದೂರು ಸಲ್ಲಿಸಿದ್ದಾರೆ. ಜನವರಿ 26 ರಂದು ಮಧ್ಯಾಹ್ನ ಮನೆಯಲ್ಲಿ ಪೇಮಾ ಹಾಗೂ ನಂದೀಶ್‌ ಊಟ ಮಾಡುತ್ತಿದ್ದ ವೇಳೆ ಕಾವ್ಯಾ, ‘ಇದು ನಮ್ಮ ಮನೆ ನೀವು ಹೊರಗೆ ಹೋಗಿ’ ಎಂದು ಹೇಳಿದ್ದಾರೆ ಎಂದು ದೂರು ನೀಡಿದ್ದಾರೆ. ಅಲ್ಲದೆ, ಪ್ರೇಮಾ ಅವರ ತಂದೆ ರವಿಕುಮಾರ್‌ಗೆ ಕರೆ ಮಾಡಿ ಧಮಕಿ ಕೂಡ ಹಾಕಿದ್ದಾರೆ ಎನ್ನಲಾಗಿದೆ.

ಆ ನಂತರ ಸಂಜೆ 6.30ಕ್ಕೆ ಮನೆಯ ಬಳಿಗೆ ಬಂದಿದ್ದ ನನ್ನ ಸಹೋದರಿ ಕಸ್ತೂರಿ ಮೇಲೆಯೂ ಕಾವ್ಯಾ ಹಾಗೂ ಆಕೆಯ ಸಂಬಂಧಿಕರಿಂದ ಹಲ್ಲೆ ಮಾಡಲಾಗಿದೆ ಎಂದು ಪ್ರೇಮಾ ಆರೋಪಿಸಿದ್ದಾರೆ. ಕಾವ್ಯಾ ಅವರ ಅಕ್ಕ ಭವ್ಯಾ ಗೌಡ, ಪ್ರೇಮಾ ಹಾಗೂ ನಂದೀಶ್‌ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ವೇಳೆ ಭವ್ಯಾ ತನ್ನ ಮಾಂಗಲ್ಯ ಸರವನ್ನು ಕಿತ್ತು ಹಾಕಿದ್ದಾರೆ ಎಂದು ಪ್ರೇಮಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Btv Kannada
Author: Btv Kannada

Read More