ಚೇತನ್ ಚಂದ್ರ ನಟನೆಯ “ಒಬ್ಬನೆ ಶಿವ” ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣ!

“ಪಿ.ಯು.ಸಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಚೇತನ್ ಚಂದ್ರ, “ಪ್ರೇಮಿಸಂ” ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಪ್ರಸ್ತುತ ಚೇತನ್ ಚಂದ್ರ “ಒಬ್ಬನೆ ಶಿವ” ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. URBAN LEGEND ಲಾಂಛನದಲ್ಲಿ ವಿ.ಪಿ.ಶಂಕರ್ ಅವರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ‌. ಕೋಲಾರ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಶೇಕಡಾ 80ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್​ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಸತ್ಯ ಕಶ್ಯಪ್ ಸಂಗೀತ ನೀಡುತ್ತಿದ್ದಾರೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಚಿತ್ರಕ್ಕೂ ಸತ್ಯ ಕಶ್ಯಪ್ ಸಂಗೀತ ನೀಡಿದ್ದಾರೆ. ಕೋರ್ಟ್ ರೂಮ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ವಿ.ಪಿ.ಶಂಕರ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಜನ್ ಛಾಯಾಗ್ರಹಣ ಹಾಗೂ ಅನ್ಬು ಸಂಕಲನ “ಒಬ್ಬನೆ ಶಿವ” ಚಿತ್ರಕ್ಕಿದೆ.

ಚೇತನ್ ಚಂದ್ರ, ಮಹಾಲಕ್ಷ್ಮೀ, ತೇಜ, ಕಿಂಗ್ ಮೋಹನ್, ವಿಶಾಲ್, ರತನ್ ಗಣಪತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Btv Kannada
Author: Btv Kannada