ಕಾಲ್ತುಳಿತ ಪ್ರಕರಣದಲ್ಲಿ ವಿರಾಟ್ ಕೊಹ್ಲಿಗೂ ಸಂಕಷ್ಟ – ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಯ್ತು ದೂರು!

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಗೂ ಸಂಕಷ್ಟ ಎದುರಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೈಜ ಹೋರಾಟಗಾರರ ವೇದಿಕೆಯ ಹೆಚ್.ಎಂ ವೆಂಕಟೇಶ್ ಅವರು ವಿರಾಟ್ ಕೊಹ್ಲಿ ವಿರುದ್ಧ ದೂರು ಸಲ್ಲಿಕೆ ಮಾಡಿದ್ದಾರೆ.

ದೂರಿನಲ್ಲಿ ಈ ನೂಕು ನುಗ್ಗಲಿಗೆ ಕೊಹ್ಲಿ ಸಹ ಕಾರಣ ಎಂದು ಆರೋಪಿಸಲಾಗಿದೆ. ಅಲ್ಲದೇ ದುರಂತ ನಡೆದ ಕುಟುಂಬವನ್ನು ಕೊಹ್ಲಿ ಭೇಟಿ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನಲ್ಲಿ ಸೆಲೆಬ್ರೇಷನ್ ತರಾತುರಿಯಲ್ಲಿ ನಡೆಯಿತು. ಇದಕ್ಕೆ ಕೊಹ್ಲಿ ಒತ್ತಡವೇ ಕಾರಣ. ವಿದೇಶ ಪ್ರವಾಸ ಇರೋದ್ರಿಂದ ಅವರು ಸೆಲೆಬ್ರೇಷನ್ ಬೇಗ ನಡೆಸುವಂತೆ ಒತ್ತಡ ಹೇರಿರುವ ಸಾಧ್ಯತೆ ಇದೆ. ಇಲ್ಲಿ ಮುಗಿಯುತ್ತಿದ್ದಂತೆ ಕೊಹ್ಲಿ ಲಂಡನ್‌ಗೆ ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊಹ್ಲಿ ವಿರುದ್ಧದ ದೂರಿನ ಪ್ರತಿಯಲ್ಲಿ, ಸ್ವೀಕರಿಸಲಾಗಿದೆ ಎಂದು ಪೊಲೀಸರು ಹಿಂಬರಹ ನೀಡಿದ್ದಾರೆ.

ಈಗಾಗಲೇ ಈ ದುರಂತಕ್ಕೆ ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೆ ಆರ್​ಸಿಬಿ ಫ್ರಾಂಚೈಸಿಯ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ಅಲ್ಲದೆ ರಾಜ್ಯ ಪೊಲೀಸ್ ಇಲಾಖೆಯಲ್ಲೂ ಕೆಲವರ ತಲೆದಂಡವಾಗಿದೆ.

ಇದನ್ನೂ ಓದಿ : ಕಾಲ್ತುಳಿತ ಪ್ರಕರಣದ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ!

Btv Kannada
Author: Btv Kannada

Read More