ಹಾಸನ : ಕರ್ನಾಟಕ ರಾಜಕಾರಣದಲ್ಲಿ ಬಹು ಸಮಯದಿಂದ ಚರ್ಚೆಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನದ ಮಹತ್ವಾಕಾಂಕ್ಷೆಯ ಕುರಿತು ಕೋಡಿಮಠದ ಶ್ರೀಗಳು ಮಹತ್ವದ ಹಾಗೂ ಮಾರ್ಮಿಕ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೋಡಿಶ್ರೀಗಳು, ಡಿಕೆಶಿ ಅವರ ಸಿಎಂ ಕನಸು ಈಡೇರುವ ಕುರಿತು ಸುಳಿವು ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕೋಡಿಮಠದ ಶ್ರೀಗಳು, ಸಂಕ್ರಾಂತಿ ಹಬ್ಬ ಮತ್ತು ಬಜೆಟ್ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ನುಡಿದಿದ್ದಾರೆ. ಬಜೆಟ್ ನಂತರ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಚರ್ಚೆ ರಾಜಕೀಯ ವಲಯದಲ್ಲಿದೆ. ಈ ಕುರಿತು ಮಾತನಾಡಿದ ಶ್ರೀಗಳು, ಸಂಕ್ರಾಂತಿ ಹಾಗೂ ಬಜೆಟ್ ಮುಗಿದ ಮೇಲೆ ಯಾರಾದರೂ ಸಿಎಂ ಆಗಬಹುದು ಎಂದಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುವ ಬಗ್ಗೆ, “ಸಂಗಮೇಶನೊಲಿವನೆ, ಆದರೆ ಒಳ ಅಡ್ಡ ಬಂದಿದೆ. ಮುಂದೆ ಸುಖಾಂತ್ಯ ಆದೀತು,” ಎಂದು ಸಕಾರಾತ್ಮಕ ಭವಿಷ್ಯ ನುಡಿದು, ಅವರ ಆಸೆ ಈಡೇರುವ ಸುಳಿವು ನೀಡಿದ್ದಾರೆ. “ಶಿವನ ಮುಡಿಯ 2 ತುಂಡು ಮಲ್ಲಿಗೆಗಳು ಶಿವನ ಬಲಪಾದ ಸೇರ್ಯಾವೆ” ಎಂಬ ಹೇಳಿಕೆಯು ರಾಜಕೀಯದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ, ರಾಜಕೀಯದಲ್ಲಿ ಎಲ್ಲವೂ ಸುಖಾಂತ್ಯವಾಗುತ್ತದೆ ಎಂಬುದು ಅವರ ಒಟ್ಟಾರೆ ಭವಿಷ್ಯ.

ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುತ್ತದೆಯೇ ಎಂಬ ನೇರ ಪ್ರಶ್ನೆಗೆ ಕೋಡಿಮಠದ ಶ್ರೀಗಳು ತಕ್ಷಣದ ಉತ್ತರ ನೀಡದೆ, ಒಂದು ಮಾರ್ಮಿಕ ಕಥೆಯ ಮೂಲಕ ಸಂದೇಶ ನೀಡಿದರು. ಒಮ್ಮೆ ಒಬ್ಬ ಬೇಡನು ಕಾಡಿನಲ್ಲಿ ಜಿಂಕೆಯನ್ನು ಓಡಿಸಿಕೊಂಡು ಬಂದು, ಅಲ್ಲಿ ಕುಳಿತಿದ್ದ ಸನ್ಯಾಸಿಯನ್ನು, “ಜಿಂಕೆ ಈ ಮಾರ್ಗದಲ್ಲಿ ಹೋಯಿತೇ?” ಎಂದು ಕೇಳುತ್ತಾನೆ. ಜಿಂಕೆಯನ್ನು ನೋಡಿದ್ದೇನೆ ಎಂದರೆ ಬೇಡನು ಅದನ್ನು ಕೊಲ್ಲುತ್ತಾನೆ. ನೋಡಲಿಲ್ಲ ಎಂದರೆ ಅದು ಸನ್ಯಾಸತ್ವಕ್ಕೆ ವಿರುದ್ಧವಾಗುತ್ತದೆ. ಆಗ ಸನ್ಯಾಸಿ, “ನಾನು ಏನನ್ನೂ ಮಾತನಾಡಲಿಲ್ಲ. ಕಣ್ಣು ನೋಡಿದೆ, ಅದು ಮಾತನಾಡುವುದಿಲ್ಲ. ನಾಲಿಗೆ ಮಾತನಾಡುವುದು, ಅದು ಜಿಂಕೆಯನ್ನು ನೋಡಿಲ್ಲ,” ಎಂದು ಅರ್ಥಪೂರ್ಣವಾಗಿ ಹೇಳಿದನು.

ಶ್ರೀಗಳು ತಾವು ನೇರವಾಗಿ ಉತ್ತರಿಸದೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ವಿವರಿಸಿದ್ದಾರೆ. ಅವರ ಈ ‘ಮಾರ್ಮಿಕ ಉತ್ತರ’ ಡಿಕೆಶಿ ಸಿಎಂ ಕನಸಿಗೆ ಪರೋಕ್ಷ ಬೆಂಬಲ ನೀಡಿದಂತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯ ಭವಿಷ್ಯದ ಜೊತೆಗೆ, ರಾಜ್ಯದ ಕುರಿತು ಭವಿಷ್ಯ ನುಡಿದ ಶ್ರೀಗಳು, “2026ಕ್ಕೆ ಇನ್ನು ಮಳೆ ಅವಾಂತರ ಹೆಚ್ಚಾಗುತ್ತೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಕಾಂತಾರ ಸಿನಿಮಾದ ಹರಕೆ ತೀರಿಸಿದ ರಿಷಬ್ ಶೆಟ್ಟಿ!







