ಕಾಂತಾರ ಸಿನಿಮಾದ ಹರಕೆ ತೀರಿಸಿದ ರಿಷಬ್ ಶೆಟ್ಟಿ!

ಮಂಗಳೂರು : ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡ ‘ಕಾಂತಾರ ಚಾಪ್ಟರ್ -1’ ಸಿನಿಮಾದ ಗೆಲುವಿನ ಹಿನ್ನೆಲೆಯಲ್ಲಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್ ವತಿಯಿಂದ ಮಂಗಳೂರಿನ ಬಾರೆಬೈಲ್‌ನಲ್ಲಿರುವ ವರಾಹ ಪಂಜುರ್ಲಿ, ಜಾರಂದಾಯ ಹಾಗೂ ಬಂಟ ದೈವಸ್ಥಾನದಲ್ಲಿ ಹರಕೆ ನೇಮೋತ್ಸವವನ್ನು ಸಡಗರದಿಂದ ನೆರವೇರಿತು.

ಹರಕೆ ನೇಮೋತ್ಸವದಲ್ಲಿ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಭಾಗವಹಿಸಿದ್ದರು. ಇದರ ಜೊತೆಗೆ, ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಮತ್ತು ನಿರ್ದೇಶಕ ಸಂತೋಷ್ ಆನಂದ್​ರಾಮ್ ಸೇರಿದಂತೆ ಹಲವು ಗಣ್ಯರು ಮತ್ತು ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು. ವಿಶೇಷವಾಗಿ, ವಾರಾಹಿ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ಇಡೀ ಸಿನಿಮಾ ತಂಡವು ಭಕ್ತಿಪೂರ್ವಕವಾಗಿ ಭಾಗಿಯಾಯಿತು.

ದೈವದ ಹರಕೆ ನೇಮೋತ್ಸವದ ಭಾಗವಾಗಿ ಚಿತ್ರತಂಡವು ಗಗ್ಗರ ಸೇವೆಯಲ್ಲಿ ಪಾಲ್ಗೊಂಡಿತು. ಇದರ ಜೊತೆಗೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಆಯೋಜಿಸಿ, ಧಾರ್ಮಿಕ ವಿಧಿಯ ಮೂಲಕ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದರು.

ರಿಷಬ್ ಶೆಟ್ಟಿ ಅವರಿಗೆ ಈ ದೈವಸ್ಥಾನದ ಮೇಲೆ ವಿಶೇಷ ನಂಬಿಕೆ ಇದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಕೂಡಾ ಅವರು ಇದೇ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ, ತಮ್ಮ ಮಗನ ಹುಟ್ಟುಹಬ್ಬದ ದಿನದಂದು ಸಹ ಅವರು ಬಾರೆಬೈಲು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದೀಗ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅದೇ ದೇವಸ್ಥಾನದಲ್ಲಿ ಇಡೀ ಚಿತ್ರತಂಡದೊಂದಿಗೆ ಹರಕೆ ನೇಮೋತ್ಸವ ಸಲ್ಲಿಸಿ, ದೈವದ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಭಾರೀ ಅನಾಹುತದಿಂದ ಪಾರು – ಚಿಕ್ಕಬಳ್ಳಾಪುರ ರಥೋತ್ಸವದಲ್ಲಿ ನೆಲಕ್ಕೆ ವಾಲಿದ ಬ್ರಹ್ಮರಥ!

Btv Kannada
Author: Btv Kannada

Read More