ಕಗ್ಗಲೀಪುರದಲ್ಲಿ ಬಿಎಂಟಿಸಿಯನ್ನು ಅಡ್ಡಗಟ್ಟಿದ ಆನೆ – ತಬ್ಬಿಬ್ಬಾದ ಪ್ರಯಾಣಿಕರು.. ವಿಡಿಯೋ ವೈರಲ್​!

ಬೆಂಗಳೂರು : ಬನ್ನೇರುಘಟ್ಟ ಸಫಾರಿಯ ಸಾಕಾನೆಯೊಂದು ರಸ್ತೆ ಮಧ್ಯೆ ನಿಂತು ಒಂದು ಗಂಟೆ ಕಾಲ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ ಅಡ್ಡಗಟ್ಟಿ ಆತಂಕ ಸೃಷ್ಟಿಸಿದ ಘಟನೆ ಕಗ್ಗಲೀಪುರ ಬಳಿಯ ಗುಳ್ಳಹಟ್ಟಿ ಕಾವಲ್‌ ಬಳಿ ಗುರುವಾರ ನಡೆದಿದೆ. ಅದೃಷ್ಟವಶಾತ್ ಯಾರಿಗೆ ಏನೂ ಮಾಡದೇ ಆನೆ ಅರಣ್ಯದೊಳಗೆ ನುಗ್ಗಿವೆ.

ಸಫಾರಿಯ ಸಾಕಾನೆಗಳನ್ನು ನಿತ್ಯವೂ ಸಂಜೆ ಬಳಿಕ ಕಾಡಿಗೆ ಬಿಡಲಾಗುತ್ತದೆ. ಅವು ಕಾಡಿನಲ್ಲಿ ಸುತ್ತಾಡಿ ಬೆಳಗ್ಗೆ ವೇಳೆಗೆ ಸಫಾರಿಗೆ ಮರುಳುತ್ತವೆ. ಇಲ್ಲವೇ ಮಾವುತರು ಕರೆದುಕೊಂಡು ಬರುತ್ತಾರೆ. ಅಂತೆಯೇ ಬುಧವಾರ ಸಂಜೆ ಎಂಟು ಆನೆಗಳು ಮಿಲ್ಟ್ರಿ ಗುಡ್ಡೆ ಬಯಲು ಬಳಿಯ ಕೆರೆಗೆ ನೀರು ಕುಡಿಯಲು ತೆರಳಿದ್ದವು. ಈ ಪೈಕಿ ವನರಾಜ ಎಂಬ ಆನೆ ಗುಂಪಿನಿಂದ ಬೇರ್ಪಟ್ಟಿದೆ.

ಇದೇ ಆನೆಯು ಗುರುವಾರ ಮುಂಜಾನೆ ಕೆ.ಆರ್‌. ಮಾರ್ಕೆಟ್‌ ಮತ್ತು ಗುಳ್ಳಹಟ್ಟಿ ಕಾವಲ್‌ ನಡುವೆ ಸಂಚರಿಸುವ ಬಿಎಂಟಿಸಿ ಬಸ್‌ (214 ಎಚ್‌)ಗೆ ದುತ್ತೆಂದು ಎದುರಾಗಿದೆ. ತಕ್ಷಣ ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ. ಇದರಿಂದ ಬಸ್‌ ಸಿಬ್ಬಂದಿ ಹಾಗೂ ಪ್ರಯಾಣಿಕರು ಕೆಲ ಕಾಲ ಆತಂಕಗೊಂಡರು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಆತಂಕಕ್ಕೆ ಒಳಗಾದರು.

ವಿಷಯ ತಿಳಿದ ಸುಮಾರು ಅರ್ಧ ಗಂಟೆಯ ನಂತರ ಸ್ಥಳಕ್ಕೆ ದೌಡಾಯಿಸಿದ ಬನ್ನೇರುಘಟ್ಟ ವಲಯ ಅರಣ್ಯ ಅಧಿಕಾರಿಗಳು ಹಾಗೂ ಉದ್ಯಾನದ ಸಿಬ್ಬಂದಿ ಸಾಕಾನೆಯನ್ನು ಕಾಡಿನತ್ತ ಓಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅದೃಷ್ಟವಶಾತ್‌ ಯಾರಿಗೂ ಹಾನಿ ಉಂಟಾಗಿಲ್ಲ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರು ಇದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆನೆ ಎಂದು ಹೇಳಿದ ನಂತರ ಇಲ್ಲಿಯ ಸ್ಥಳೀಯ ಜನರು ನಿಟ್ಟುಸಿರು ಬಿಡುವಂತಾಯಿತು. ಸದ್ಯ ಆನೆ ಬಸ್ಸಿಗೆ ಅಡ್ಡವಾಗಿ ನಿಂತಿರುವುದು ಹಾಗೂ ಬಳಿಕ ಬಸ್ಸಿನ ಸುತ್ತ ತಿರುಗಾಡಿದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ : ಒಕ್ಕಲಿಗರಲ್ಲಿ ಬಡವರಿಲ್ವಾ? ಲಿಂಗಾಯತರಲ್ಲಿ ಬಡವರಿಲ್ವಾ – ಜಾತಿ ಗಣತಿ ಚರ್ಚೆ ವೇಳೆ ಏರು ಧ್ವನಿಯಲ್ಲಿ ಡಿಕೆ ಶಿವಕುಮಾರ್ ಪ್ರಶ್ನೆ!

Btv Kannada
Author: Btv Kannada

Read More