ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿದ ಹೊಸ ಸಿನಿಮಾ ಜವರ. ಅಪರೇಷ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಹಾಗೂ ದುನಿಯ ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ಜವರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಲಾ ಕುನ್ನಿ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ದಳವಾಯ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದು, ಚಿದಾವೃಷಭ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಜವರ ಸಿನಿಮಾದ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿಅದ್ದೂರಿಯಾಗಿ ನೆರವೇರಿತು. ಜವರ ಟೈಟಲ್ ಕೇಳಿದ್ರೆ ಮೈ ಜುಮ್ ಎನ್ನುವಂತಿದೆ. ಮಾಸ್ ಟೈಟಲ್ ರಿವೀಲ್ ಮಾಡುವ ಜೊತೆಗೆ ಚಿತ್ರೀಕರಣಕ್ಕೆ ಚಾಲನೆ ಕೂಡ ಸಿಕ್ಕಿದೆ. ಸ್ಮಶಾನದಲ್ಲಿ ಶವಗಳನ್ನು ಹೂಳುವ ಕೆಲಸ ಮಾಡುತ್ತಿರುವ ನೀಲಮ್ಮ ಜವರ ಸಿನಿಮಾಗೆ ಕ್ಲಾಪ್ ಮಾಡಿದ್ದು ವಿಶೇಷವಾಗಿತ್ತು. ಸಿನಿಮಾದ ವಿಶೇಷ ಪಾತ್ರಗಳಲ್ಲಿ ಹಿರಿಯ ನಟ ರಂಗಾಯಣ ರಘು ಮತ್ತು ನಟಿ ಶ್ರುತಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾದ ಮೇಲಿನ ನಿರೂಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ನಟ ರಂಗಾಯಣ ರಘು ಈ ಸಿನಿಮಾದಲ್ಲಿ ಗೌರಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ರಂಗಾಯಣ ರಘು ಅವರು ಶ್ರುತಿ ಅವರ ಜೊತೆ ಮತ್ತೆ ನಟಿಸುತ್ತಿದ್ದೀನಿ. ಪಾತ್ರ ತುಂಬಾ ಅದ್ಭುತವಾಗಿದೆ. ಈ ಸಿನಿಮಾದಲ್ಲಿ ನಾನು ಇರುವ ಜಾಗ ತುಂಬಾ ಪ್ರಶಾಂತವಾಗಿರುತ್ತೆ, ಶಿವ ಇರುವ ಜಾಗವದು. ಅಂಥ ಅದ್ಭುತ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದರು.

ಇನ್ನೂ ನಟಿ ಶ್ರುತಿ ರಾಯಲ್ ಮೀನಾಕ್ಷಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಪಾತ್ರದ ಬಗ್ಗೆ ತುಂಬಾ ಖುಷಿಯಾಗಿರುವ ಶ್ರುತಿ, ಕಥೆ ತುಂಬಾ ಚೆನ್ನಾಗಿದೆ. ಬದುಕೆಲ್ಲ ಮುಗಿದ ಮೇಲೆ ಹೊರಡುವ ಜಾಗದಲ್ಲಿ ಇರ್ತೀನಿ ಎಂದರು.
ಇನ್ನೂ ನಟಿ ರಿತನ್ಯಾ ಜವರ ಸಿನಿಮಾ ಮೂಲಕ ಅಧಿಕೃತವಾಗಿ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೊದಲು ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ನಟಿಸಿದ್ದರೂ ನಾಯಕಿಯಾಗಿ ಜವರ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಿತನ್ಯಾ ಭೂಮಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿತನ್ಯಾ ಅವರು, ವೈದ್ಯಕೀಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ದೊಡ್ಡ ದೊಡ್ಡ ಕಲಾವಿದರು ಈ ಸಿನಿಮಾದಲ್ಲಿದ್ದಾರೆ ಅವರ ಜೊತೆ ನಟಿಸುತ್ತಿರುವುದು ತುಂಬಾ ಖುಷಿ ಇದೆ. ನಾನು ತುಂಬಾ ಲಕ್ಕಿ ಎನಿಸುತ್ತೆ ಎಂದು ಹೇಳಿದರು.

ನಟ ರಿಷಿ ರುದ್ರ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿ, ಕಥೆ ತುಂಬಾ ಇಷ್ಟವಾಯಿತು, ನಿರ್ದೇಶಕರು ಕಥೆ ಹೇಳುವಾಗಲೇ ಸ್ಕ್ರೀನ್ ಪ್ಲೇ ಕೂಡ ರೆಡಿಮಾಡಿಕೊಂಡಿದ್ದರು. ಅದು ತುಂಬಾ ಇಷ್ಟ ಆಯ್ತು. ನಿರ್ದೇಶಕರು ತುಂಬಾ ಯೋಚಿಸಿ ಮಾಡಿರುವ ಕಥೆ ಇದು. ನಿರ್ದೇಶಕ ಎನ್ನುವುದಕ್ಕಿಂತ ಕ್ರಿಯೇಟಿವ್ ಹೆಡ್ ಎನ್ನುಬಹುದು. ರಿತನ್ಯಾ ತುಂಬಾ ಚೆನ್ನಾಗಿ ನಟಿಸುತ್ತಾರೆ ಎಂದರು.
ನಿರ್ದೇಶಕ ಪ್ರದೀಪ್ ಈ ಸಿನಿಮಾದಲ್ಲಿ ನಿರ್ದೇಶನದ ಜೊತೆಗೆ ಸಂಭಾಷಣೆಯ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಿನಿಮಾದ ಕಥೆಗೆ ನಟಿ ಶ್ರುತಿ ಮತ್ತು ರಂಗಾಯಣ ರಘು ಅವರು ತುಂಬಾ ಅವಶ್ಯಕತೆ ಇತ್ತು. ಪಾತ್ರ ತುಂಬಾ ಚೆನ್ನಾಗಿದೆ. ರಿತನ್ಯಾ ಅವರು ತುಂಬಾ ಚೆನ್ನಾಗಿ ನಟಿಸುತ್ತಾರೆ. ಅದನ್ನ ನೋಡಿ ವಿಜಯ್ ಅವರಿಗೆ ಕಥೆ ಹೇಳಿದೆ ,ಅವರಿಗೆ ಇಷ್ಟ ಆಯ್ತು ಮಗಳಿಗೆ ಓಕೆ ಆಗಬೇಕು ಅಂತ ಹೇಳಿದರು. ಬಳಿಕ ರಿತನ್ಯಾ ಕೂಡ ಒಪ್ಪಿಕೊಂಡರು. ರಿಷಿ ತುಂಬಾ ಒಳ್ಳೆಯ ಕಲಾವಿದ ಎಂದು ನಿರ್ದೇಶಕ ಪ್ರದೀಪ್ ಹೇಳಿದರು.

ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯಲಾ ಕುನ್ನಿ ಸಿನಿಮಾದಲ್ಲೂ ನಿರ್ದೇಶಕ ಪ್ರದೀಪ್ ಮತ್ತು ಧರ್ಮವಿಶ್ ಒಟ್ಟಿಗೆ ಕೆಲಸ ಮಾಡಿದ್ದರು ಇದೀಗ ಜವರ ಸಿನಿಮಾದಲ್ಲೂ ಇಬ್ಬರ ಕಾಂಬಿನೇಷನ್ ಮುಂದುವರೆದಿರುವುದು ವಿಶೇಷ. ಹಾಲೇಶ್ ಕ್ಯಾಮರಾ ವರ್ಕ್ ಸಿನಿಮಾಗಿರಲಿದೆ.
ಇದನ್ನೂ ಓದಿ : ಹಳೆ ವೈಷಮ್ಯ – ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!







