ತ್ವರಿತಗತಿಯಲ್ಲಿ ವಿಚಾರಣೆ.. ಸಾಲು ಸಾಲು ಪ್ರಕರಣಗಳ ವಿಲೇವಾರಿಯಲ್ಲಿ ನ್ಯಾ. ಎಂ.ನಾಗಪ್ರಸನ್ನ ಅವರಿಗೆ ಅಗ್ರಸ್ಥಾನ!

ಬೆಂಗಳೂರು : ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿರುವ ಎಂ.ನಾಗಪ್ರಸನ್ನ ಅವರು ತಮ್ಮ ಸೇವಾ ಅವಧಿಯಲ್ಲಿ ದಾಖಲಾಗಿರುವ ಸಾಲು ಸಾಲು ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮಾಡುತ್ತಿದ್ದು, ರಾಜ್ಯದ ಮೂರೂ ಪೀಠಗಳ ನ್ಯಾಯಮೂರ್ತಿಗಳ ಪೈಕಿ ನ್ಯಾ. ಎಂ.ನಾಗಪ್ರಸನ್ನ ಅಗ್ರಸ್ಥಾನದಲ್ಲಿದ್ದಾರೆ.

ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿ ಸೇರಿದಂತೆ ಒಟ್ಟು ಮೂರೂ ಪೀಠಗಳಲ್ಲಿನ ಹಾಲಿ 43 ನ್ಯಾಯಮೂರ್ತಿಗಳಲ್ಲಿ, ಕೇಸ್​ಗಳ ವಿಲೇವಾರಿಯಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮುಂಚೂಣಿಯಲ್ಲಿದ್ದಾರೆ. ದೇಶದ ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ವಿಲೇವಾರಿ ವೇಗದಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ಬೆಳಿಗ್ಗೆ 10.30ರಿಂದ ಸಂಜೆ 7.15ರವರೆಗೆ 535 ಅರ್ಜಿಗಳ ವಿಚಾರಣೆ ನಡೆಸಿದ್ದಾರೆ.

ರಿಟ್, ಕ್ರಿಮಿನಲ್, ಸಿವಿಲ್, ಕೌಟುಂಬಿಕ, ವಿವಿಧ ಪ್ರಾಧಿಕಾರಗಳೂ ಸೇರಿದಂತೆ ಹೊಸ ಮುಖ್ಯ ನ್ಯಾಯಮೂರ್ತಿಗಳು ಬಂದ ಮೇಲೆ ತೆರಿಗೆ ಪ್ರಕರಣಗಳನ್ನೂ ಇವರಿಗೆ ವರ್ಗಾಯಿಸಲಾಗಿದೆ. ಎಲ್ಲ ಪ್ರಕಾರಗಳಲ್ಲೂ ಸೂಕ್ಷ್ಮ ಮತ್ತು ತೀವ್ರ ವೇಗದಲ್ಲಿ ವಿಲೇವಾರಿಯ ಜಾಣ್ಮೆ ಹೊಂದಿರುವ ನ್ಯಾ.ನಾಗಪ್ರಸನ್ನ ಅವರು ಸೋಮವಾರ ವಿಚಾರಣೆ ನಡೆಸಿದ 535 ಅರ್ಜಿಗಳಲ್ಲಿ 66 ಅರ್ಜಿಗಳನ್ನು ವಿಲೇವಾರಿ ಮಾಡಿದ್ದಾರೆ.

ಈ ಮೂಲಕ ಅವರು ನ್ಯಾಯಮೂರ್ತಿಯಾಗಿ ನೇಮಕಗೊಂಡ 2019ರ ನವೆಂಬರ್ 11ರಿಂದ ಈತನಕ ಒಟ್ಟು 22 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ. ಈ ಬಾರಿಯ ರೋಸ್ಟರ್‌ನಲ್ಲಿ ಅಂದರೆ 2025ರ ಜುಲೈ 28ರಿಂದ ಸೋಮವಾರದವರೆಗೆ ವಿವಿಧ ನಮೂನೆಯ ವರ್ಗಗಳಲ್ಲಿನ 1,046 ಅರ್ಜಿಗಳು ಇತ್ಯರ್ಥಗೊಂಡಿವೆ.

ನ್ಯಾ. ನಾಗಪ್ರಸನ್ನ ಅವರು 1971ರ ಮಾರ್ಚ್‌ 23ರಂದು ಜನಿಸಿದ್ದು, 2019ರ ನವೆಂಬರ್ 26ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಕಾಯಂಗೊಂಡಿದ್ದಾರೆ.

ಇದನ್ನೂ ಓದಿ : 15 ನಿಮಿಷದ ಪ್ರಯಾಣಕ್ಕೆ ಒಂದೂವರೆ ಗಂಟೆ ವ್ಯಯ – ನಮ್ಮ ಮೆಟ್ರೋ ಆಡಳಿತ ವಿರುದ್ಧ ಸಿಡಿದೆದ್ದ ಸ್ಟೂಡೆಂಟ್ಸ್!

Btv Kannada
Author: Btv Kannada

Read More