ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಂದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳಕ್ಕೆ ಭೇಟಿ ನೀಡಲಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ.
ಪ್ರಧಾನಿ ಮೋದಿಯವರು ಬೆಳಗ್ಗೆ 10:05ಕ್ಕೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ 10:10ಕ್ಕೆ ಡಿಪಿಎಸ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ, ನಂತರ 10:45ಕ್ಕೆ ಏರಿಯಲ್ ಘಾಟ್‌ಗೆ ತೆರಳಲಿದ್ದಾರೆ. 10:50ರ ಸುಮಾರಿಗೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿಯಲ್ಲಿ ಪ್ರಯಾಣಿಸಲಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಮೋದಿ ಅವರನ್ನು ಸ್ವಾಗತಿಸಲಿದ್ದು, ತದನಂತರ 11:00 ರಿಂದ 11:30ರ ವರೆಗೆ ಸಂಗಮ್ ಘಾಟ್‌ನಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ ಮಾಡಲಿದ್ದಾರೆ.
ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಸಂತರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ. ಜೊತೆಗೆ 2025ರ ಮಹಾಕುಂಭದಲ್ಲಿ ಭಾಗವಹಿಸುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿದ್ದಾರೆ.
ಪ್ರಧಾನಿ ಮೋದಿ ಆಗಮನದ ಹಿನ್ನೆಯಲ್ಲಿ ಪ್ರಯಾಗ್ ರಾಜ್‌ನಲ್ಲಿ ಬಿಗಿ ಬಂದೋಬಸ್ತ್ ಹೆಚ್ಚು ಮಾಡಲಾಗಿದೆ. ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆಯ ಕಾಲ್ತುಳಿತದಲ್ಲಿ 30 ಭಕ್ತರು ಬಲಿಯಾದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಭಕ್ತರ ರಕ್ಷಣೆಗೆ ಮತ್ತಷ್ಟು ಭದ್ರತೆ ಹೆಚ್ಚಿಸಿದೆ. ಇನ್ನು ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿನ್ನೆಯೇ ಪ್ರಯಾಗ್ರಾಜ್ಗೆ ಭೇಟಿ ನೀಡಿದ್ದು, ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
