ಮಂಗಳೂರು : ರಾಜ್ಯದಲ್ಲಿ ಮತ್ತೆ ಶುರುವಾಯ್ತು ಟಿಪ್ಪು ಸದ್ದು. ಕಳೆದ ಕೆಲ ಸಮಯದಿಂದ ತಣ್ಣಗಾಗಿದ್ದ ಟಿಪ್ಪು ವಿವಾದ ಇದೀಗ ಮಂಗಳೂರಿನಲ್ಲಿ ಮತ್ತೆ ತಲೆಯೆತ್ತಿದೆ.
ಹೌದು, ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ DYFI 12ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಆ ಪ್ರಯುಕ್ತ ಹರೇಕಳ ಕಚೇರಿ ಬಳಿ DYFI ಮುಖಂಡರು ಹಾಕಿದ ಟಿಪ್ಪು ಸುಲ್ತಾನ್ ಕಟೌಟ್ ತೆರವಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
DYFI ರಾಜ್ಯ ಸಮ್ಮೇಳನದ ಪ್ರಯುಕ್ತ ಅಲ್ಲಲ್ಲಿ ನಾಡಿನ ಆದರ್ಶ ಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಪ್ರತಿಮೆ, ಫ್ಲೆಕ್ಸ್ ಹಾಕಲಾಗಿದೆ. ಅದೇ ರೀತಿ ಹರೇಕಳದಲ್ಲಿ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಪ್ರತಿಮೆ ಅಳವಡಿಸಿದ್ದಾರೆ. ಹರೇಕಳದ DYFI ಕಚೇರಿ ಬಳಿಯಲ್ಲೇ ಕಾರ್ಡ್ ಬೋರ್ಡ್ನಿಂದ 6 ಅಡಿ ಉದ್ದದ ಟಿಪ್ಪು ಸುಲ್ತಾನ್ ಕಟೌಟ್ ನಿರ್ಮಿಸಲಾಗಿದೆ. ಈ ಕಟೌಟ್ ತೆರವಿಗೆ ಪೊಲೀಸರು ಸೂಚಿಸಿದ್ದಾರೆ.
ಪೊಲೀಸರು ನೋಟಿಸ್ ನೀಡಿರುವ ಹಿನ್ನೆಲೆ ಪ್ರತಿಕ್ರಿಯಿಸಿದ DYFI ದ. ಕ ಜಿಲ್ಲಾ ಸಮಿತಿ ಅಧ್ಯಕ್ಷ ‘ಟಿಪ್ಪು ಸುಲ್ತಾನ್ ಪ್ರತಿಮೆ, ಬ್ಯಾನರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಸರ್ಕಾರ ನಿಷೇಧ ಹಾಕಿದೆಯಂತೆ. ಟಿಪ್ಪು ಪ್ರತಿಮೆ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ.
ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಕೋಟಿ ಚೆನ್ನಯರ ಪ್ರತಿಮೆ ಸೇರಿದಂತೆ ಎಲ್ಲಾ ಆದರ್ಶರ, ಮಹಾತ್ಮರ ಪ್ರತಿಮೆ, ಬ್ಯಾನರ್ಗಳಿಗೆ DYFI ಕಾರ್ಯಕರ್ತರು ಕಾವಲು ನಿಂತು ಕಾಯುತ್ತಾರೆ’ ಎಂದು ತಿಳಿಸಿದ್ದಾರೆ. ಕಟೌಟ್ ಹಾಕುವಾಗ ಪೊಲೀಸ್ ಅನುಮತಿ ಪಡೆಯದೇ ಇರುವುದರಿಂದ ಕಟೌಟ್ ತೆರವು ಮಾಡುವಂತೆ ಕಾರ್ಯಕರ್ತರಿಗೆ ಕೋಣಾಜೆ ಠಾಣಾಧಿಕಾರಿ ಸೂಚಿಸಿದ್ದು, ಇತ್ತ ಟಿಪ್ಪು ಪ್ರತಿಮೆ ಹಾಗೂ ಬ್ಯಾನರ್ ತೆಗೆಯಲ್ಲ ಅಂತಾ DYFI ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ : ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್ ಫಿಕ್ಸ್..