ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, ಇಲ್ಲಿಯವರೆಗೆ ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಕೇವಲ ದಂಡ ವಿಧಿಸಲಾಗುತ್ತಿತ್ತು. ಆದರೆ ಆಗಸ್ಟ್ 1 ರಿಂದ ದಂಡದ ಜೊತೆ FIR ಸಹ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭಾರೀ ಸಂಖ್ಯೆಯಲ್ಲಿ ಅಪಘಾತವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ನಡುವಿನ ವ್ಯತ್ಯಾಸದ ಕುರಿತು ಮಾಹಿತಿ ನೀಡಿರುವ ಅವರು, ಓವರ್ ಸ್ಪೀಡಿಂಗ್ ಅನ್ನು ಸಾಮಾನ್ಯವಾಗಿ ಕ್ಯಾಮೆರಾ ಪಾಯಿಂಟ್ ಬಳಿ ಸ್ಪಾಟ್ ಸ್ಪೀಡ್ ಎಂದು ಅಳೆಯಲಾಗುತ್ತದೆ. ಬೇರೆಡೆ ವೇಗವಾಗಿ ಓಡಿಸಿ ಕ್ಯಾಮರಾಗಳ ಬಳಿ ಚಾಲಕ ವೇಗ ಕಡಿಮೆ ಮಾಡಿದರೂ ಕೇಸ್ ಬುಕ್ ಆಗುತ್ತದೆ.
ಅತಿ ವೇಗವು 90% ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ 155 ಮಂದಿ ಗಂಟೆಗೆ 130 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಸಂಚರಿಸಿದ್ದಾರೆ. ಇನ್ನು ಮುಂದೆ ಆಗಸ್ಟ್ 1 ರಿಂದ ಕರ್ನಾಟಕದಲ್ಲಿ 130 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಿದರೆ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ ಚಿನ್ನದ ಬಿಸ್ಕೆಟ್ SIT ವಶಕ್ಕೆ..!