ಬೆಂಗಳೂರು : ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ಫಿಕ್ಸ್ ಆಗಿದೆ. ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಏಪ್ರಿಲ್ 15 ರಿಂದ ಏಪ್ರಿಲ್ 23ರವರೆಗೆ ಸಂಭ್ರಮದಿಂದ ನಡೆಯಲಿದ್ದು, ಏಪ್ರಿಲ್ 23 ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ.
ಈ ಬಾರಿಯೂ ಪೂಜಾರಿ ಎ. ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಜ್ಞಾನೇಂದ್ರ ಅವರು 13ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎ.ಜ್ಞಾನೇಂದ್ರ ಸ್ವಾಮಿ ಅವರನ್ನು ಕರಗ ಹೊರಲು ಆಯ್ಕೆ ಮಾಡಿದೆ.
ಈ ಬಾರಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಹಾಗೂ ಭದ್ರತೆಯಲ್ಲಿ ಕರಗ ಮಹೋತ್ಸವ ನಡೆಸಲು ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ತಿಳಿಸಿದೆ. ಬೆಂಗಳೂರು ಕರಗ ಮಹೋತ್ಸವವು ಇತಿಹಾಸ ಪ್ರಸಿದ್ಧವಾಗಿದ್ದು, ಕರಗ ಎಂಬ ಹೆಸರು ಹೂವಿನ ದಿಂಡು ಮತ್ತು ದೇವಿಯ ವಿಗ್ರಹವನ್ನು ಹೊಂದಿರುವ ಕಲಶದ ಅನುರೂಪವಾಗಿದೆ.
ಹೂವಿನ ದಿಂಡಿನಿಂದ ಅಲಂಕೃತಗೊಂಡ ಮಣ್ಣಿನ ಮಡಿಕೆ ಅದರಲ್ಲಿರುವ ಕಲಶವನ್ನು ಕೈಯಲ್ಲಿ ಮುಟ್ಟದೆ ಆ ಕಲಶವನ್ನು ಹೊರುವ ವ್ಯಕ್ತಿಯ ತಲೆ ಮೇಲೆ ಇಟ್ಟ ಮೇಲೆ ಕರಗ ಪ್ರದರ್ಶನ ನಡೆಯುತ್ತದೆ. ಕರಗವನ್ನು ಹೊರುವವರು ಮಹಿಳೆಯಂತೆ ಅಲಂಕಾರ ಮಾಡಿಕೊಂಡಿರಬೇಕು.
ಇದನ್ನೂ ಓದಿ : ಒಂದೇ ವಿಮಾನದಲ್ಲಿ ಡಿಕೆಶಿ ಜೊತೆ ಎಸ್.ಟಿ ಸೋಮಶೇಖರ್ ಪ್ರಯಾಣ..!