ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್ ಕೆಲಸ ಮಾಡಿಲ್ಲ. ಹೀಗಾಗಿ ನಿರ್ಮಾಪಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಮಧ್ಯೆ ನಿರ್ದೇಶಕ ಎಪಿ ಅರ್ಜುನ್ ಮೇಲೂ ಕಮಿಷನ್ ಆರೋಪ ಕೇಳಿಬಂದಿತ್ತು. ಇದೀಗ ಕಮಿಷನ್ ಆರೋಪ ಸುಳ್ಳು ಎಂದು ಸುದ್ದಿಗೋಷ್ಠಿ ಕರೆದು ಎಪಿ ಅರ್ಜುನ್ ಸ್ಪಷ್ಟನೆ ನೀಡಿದ್ದಾರೆ.
ವಕೀಲ ಶಂಕರಪ್ಪ ಜೊತೆ ಮೆಗಾ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ A.P.ಅರ್ಜುನ್ ಅವರು, ನನ್ನ ವಿರುದ್ಧದ ಕಮಿಷನ್ ಆರೋಪ ಸುಳ್ಳು. ನಾನು ಯಾರಿಂದಲೂ ಕಮಿಷನ್ ಪಡೆದುಕೊಂಡಿಲ್ಲ ಎಂದಿದ್ದಾರೆ.
ನನಗೂ ಮಾಧ್ಯಮದ ಮೂಲಕ ಗೊತ್ತಾಯ್ತು ನಾನು 50 ಲಕ್ಷ, 75 ಲಕ್ಷ ಕಮಿಷನ್ ತಗೊಂಡಿದ್ದೀನಿ, ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ರು. ಸಿ.ಜಿ ಮೋಸದ ವಿಚಾರದಲ್ಲಿ ಇಬ್ಬರ ಮೇಲೆ ಆರೋಪ ಮಾಡಲಾಗಿದೆ. ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಆರೋಪಿಗಳು ಎಂದಿದ್ದಾರೆ.
ಕ್ಲೈಮ್ಯಾಕ್ಸ್ ಸಿ.ಜಿ ಕೆಲಸವನ್ನು ಅವರಿಗೆ ಕೊಡೋಕೆ ಮುಂದಾಗಿದ್ವಿ. ಕೆಲಸ ಚೆನ್ನಾಗಿ ಮಾಡ್ತಾನೆ ಅಂತಾ ಫುಲ್ ಸಿನಿಮಾ ಕೊಟ್ಟಿದ್ವಿ. ಕಾಟೇರ ಹಾಗೂ ರವಿಶಂಕರ್ ನಿರ್ದೇಶನದ ಸುಬ್ರಹ್ಮಣ್ಯ ಸಿನಿಮಾಗೂ ಮೋಸ ಮಾಡಿದ್ದಾನೆ. ಅವ್ರಿಂದನೂ ದುಡ್ಡು ಪಡೆದು ಓಡಿ ಹೋಗಿದ್ದಾನೆ. ನನ್ನ ಮೇಲೆ ಯಾವುದೇ FIR ದಾಖಲಾಗಿಲ್ಲ ಆದರೂ ನನ್ನನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಆಗ್ತಿದೆ. ನನ್ನ ಮೇಲೆ ಸುಮ್ಮನೇ ಆರೋಪ ಮಾಡಿ, ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಪೊಲೀಸರು ನನ್ನ ಕರೆಸಿ ವಿಚಾರಣೆ ನಡೆಸಿದ್ರು. ನಾನು ಪೊಲೀಸರ ವಿಚಾರಣೆಗೆ ಸಹಕಾರ ಮಾಡ್ತೀನಿ. ನನ್ನ ಅಕೌಂಟ್ ಅನ್ನೂ ಪರಿಶೀಲನೆ ಮಾಡಿದ್ದರು. ಹಣ ಬಂದಿರೋ ಬಗ್ಗೆ ಯಾವುದೇ ಮಾಹಿತಿಯೂ ಸಿಕ್ಕಿಲ್ಲ ಎಂದಿದ್ದಾರೆ.
ಇನ್ನೂ ನಮ್ಮ ಇವತ್ತಿನ ಸುದ್ದಿಗೋಷ್ಟಿ ಎರಡು ಖಾಸಗಿ ಚಾನೆಲ್ ಗಳು ಕಾರಣ. ನಿಮ್ಮ ಬಳಿ ದಾಖಲೆ ಇದ್ರೆ ಸುದ್ದಿ ಮಾಡಿ. ಸುಖಸುಮ್ಮನೆ ಮಾಡಬೇಡಿ. ಎ.ಪಿ.ಅರ್ಜುನ್ ಅಂತಾ ಹೆಸ್ರು ತಗೋಳೋಕೆ ಸಾಕಷ್ಟು ಕಷ್ಟ ಪಟ್ಟಿದ್ದೀನಿ. ಎಫ್ ಐ ಆರ್ ನಲ್ಲಿ ನನ್ನ ಹೆಸರು ಇಲ್ಲ. ಇನ್ನೂ ಮುಂದೆ ನನ್ನ ವಿರುದ್ಧ ಷಢ್ಯಂತ್ರ ಮಾಡುವವರಿಗೆ ಕಾನೂನು ಮೂಲಕ ಉತ್ತರ ಕೊಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.