ಪ್ಯಾರಿಸ್ : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ್ಕಾಗಿ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ಹಾಕಿ ತಂಡ ಸ್ಪೇನ್ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದೆ.
ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು 2-3 ಅಂತರದಲ್ಲಿ ಸೋತು ಫೈನಲ್ ತಲುಪಲು ವಿಫಲಗೊಂಡಿದ್ದ ಭಾರತ ಹಾಕಿ ತಂಡ, ಇಂದು (ಆಗಸ್ಟ್ 8) ನಡೆದ ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಗೋಲ್‌ಗಳಿಂದ ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ.
ದಿಗ್ಗಜ ಗೋಲ್ ಕೀಪರ್ ಶ್ರೀಜೇಶ್‌ಗೆ ಗೆಲುವಿನ ವಿದಾಯ : ಇದರೊಂದಿಗೆ ಹಾಕಿ ದಿಗ್ಗಜ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರು ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಸಲ್ಲಿಸಿದ್ದಾರೆ. ಭಾರತದ ಅನುಭವಿ ಗೋಲ್‌ಕೀಪರ್ ಮತ್ತು ಹಾಕಿ ತಂಡದ ಮಾಜಿ ನಾಯಕ ಪಿಆರ್ ಶ್ರೀಜೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುಂಚೆಯೇ ಇದು ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯಾವಳಿ ಎಂದು ಘೋಷಿಸಿದ್ದರು. ಅದರಂತೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪೇನ್ ತಂಡವನ್ನು ಮಣಿಸಿದ ಕೂಡಲೇ ಪಿ.ಆರ್ ಶ್ರೀಜೇಶ್‌ಗೆ ತಂಡದ ಆಟಗಾರರು ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಭಾರತ ಹಾಕಿ ತಂಡದ ಸಾಧನೆಯನ್ನು ಶ್ಲಾಘಿಸಿರುವ ಮೋದಿ : “ಭಾರತದ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕವನ್ನು ಗೆದ್ದಿದೆ! ಇದು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಇದು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕವಾಗಿದೆ. ಈ ಯಶಸ್ಸು ಅವರ ಕೌಶಲ್ಯ, ಪರಿಶ್ರಮ ಮತ್ತು ಸಾಂಘಿಕ ಮನೋಭಾವದ ವಿಜಯವಾಗಿದೆ. ತಂಡವು ಅಪಾರ ತಾಳ್ಮೆ ಮತ್ತು ದೃಢತೆಯನ್ನು ತೋರಿಸಿದೆ. ಪ್ರತಿಯೊಬ್ಬ ಭಾರತೀಯನು ಹಾಕಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾನೆ. ಈ ಸಾಧನೆಯು ನಮ್ಮ ದೇಶದ ಯುವಕರಲ್ಲಿ ಆಟವನ್ನು ಇನ್ನಷ್ಟು ಜನಪ್ರಿಯಗೊಳಿಸಲಿದೆ’’ ಎಂದಿದ್ದಾರೆ.
ಇದನ್ನೂ ಓದಿ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 5ನೇ ಪದಕ – ಜಾವೆಲಿನ್ನಲ್ಲಿ ಬೆಳ್ಳಿ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ..!