ಪ್ಯಾರಿಸ್ : 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ಭಾರತಕ್ಕೆ ಪ್ರಸಕ್ತ ಕ್ರೀಡಾಕೂಟದಲ್ಲಿ ಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರತಿ ಕ್ರೀಡಾಕೂಟದಲ್ಲೂ ಉತ್ತಮ ಆರಂಭ ಪಡೆಯುತ್ತಿದ್ದ ನೀರಜ್ಗೆ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಕೊಂಚ ಆಘಾತ ಎದುರಾಗಿತ್ತು. ಅವರ ಮೊದಲ ಎಸೆತವೇ ಫೌಲ್ ಆಗಿತ್ತು. ಈ ಥ್ರೋ 86 ಮೀಟರ್‌ಗಿಂತ ಹೆಚ್ಚಿದ್ದರೂ ಅದನ್ನು ಪರಿಗಣಿಸಲಾಗಿಲ್ಲ. ನೀರಜ್ಗೆ ಪೈಪೋಟಿ ನೀಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಮೊದಲ ಎಸೆತವನ್ನು ಫೌಲ್ ಮಾಡಿದ್ದರು. ಆದರೆ ನಂತರದ ಎಸೆತದಲ್ಲಿ 92.97 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಭದ್ರಪಡಿಸಿಕೊಂಡರು. ಮುಂದಿನ ಪ್ರಯತ್ನದಲ್ಲಿ ನೀರಜ್, 89.45 ಮೀಟರ್ ದೂರ ಎಸೆದು ಎರಡನೇ ಸ್ಥಾನವನ್ನು ಖಚಿತಪಡಿಸಿಕೊಂಡರು.
2020ರಲ್ಲಿ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ನೀರಜ್ ಚೋಪ್ರಾ, ಇದೀಗ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 89.45 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇನ್ನು, ಇದೇ ಸ್ಪರ್ಧೆಯಲ್ಲಿ ಕಳೆದ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಈ ಬಾರಿ ದಾಖಲೆಯ 92.97 ಮೀ. ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದಲ್ಲದೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಗ್ರೆನಡಾದ ಆಂಡರ್ಸನ್ ಪೀಟರ್ಸ್ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ : ವಯನಾಡು ಭೂಕುಸಿತ : ಸಂತ್ರಸ್ತರ ನೆರವಿಗೆ 2 ಕೋಟಿ ರೂ. ದೇಣಿಗೆ ನೀಡಿದ ನಟ ಪ್ರಭಾಸ್..!