ಬೆಂಗಳೂರು : ಆಟೋ ಪಾರ್ಕಿಂಗ್ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿದ್ದು, ಹಾಗೂ ಕೆಲವರ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಪ್ರಗತಿಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಭಾನುವಾರ ರಾತ್ರಿ ಆಟೋ ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ಸಂಭವಿಸಿದೆ. ಎರಡೂ ಕುಟುಂಬಗಳೂ ಬೇರೆ ಬೇರೆ ಧರ್ಮದವರಾದ ಕಾರಣ ಕೋಮು ಸಂಘರ್ಷದ ಉದ್ವಿಗ್ನತೆಯ ವದಂತಿ ಹರಿದಾಡಿತ್ತು. ಸದ್ಯ ಈಗ ಅದೊಂದು ಜಗಳವಾಗಿದ್ದು ಘಟನೆಯಲ್ಲಿ ಅನೇಕರ ಮೇಲೆ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಲೇಔಟ್ ಏರಿಯಾದ ಅಕ್ಕಪಕ್ಕದ ನಿವಾಸಿಗಳಾದ ಶಿವಕುಮಾರ್ ಹಾಗೂ ಸೈಯದ್ ತಾಹ ಎಂಬ ಇಬ್ಬರು ಆಟೋ ಪಾರ್ಕಿಂಗ್ ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ. ಶಿವಕುಮಾರ್ ತಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿಕೊಂಡಿದ್ದರು. ಸೈಯದ್ ತಾಹ ಮನೆಯ ಮುಂದೆ ಆತನ ಸಂಬಂಧಿ ಆಟೋ ನಿಲ್ಲಿಸಿದ್ದ. ವೇಗವಾಗಿ ಬಂದು ಆಟೋ ನಿಲ್ಲಿಸಿದ್ದಕ್ಕೆ ತಾಹ ಸಂಬಂಧಿಯನ್ನು ಪಕ್ಕದ ಮನೆ ನಿವಾಸಿ ಶಿವಕುಮಾರ್ ಹಾಗೂ ಕುಟುಂಬಸ್ಥರು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಪರಸ್ಪರ ಗಲಾಟೆ ನಡೆಯುತ್ತಿದ್ದಾಗ ಘಟನಾ ಸ್ಥಳಕ್ಕೆ ಬಂದಿದ್ದ ಅಪರಿಚಿತ ವ್ಯಕ್ತಿ ಪಕ್ಕದಲ್ಲೇ ಇದ್ದ ಮಸೀದಿಯಿಂದ ಜೊತೆಗಾರರ ಜೊತೆ ಬಂದು ಮತ್ತೆ ಗಲಾಟೆ ನಡೆಸಿದ್ದಾನೆ.
ಈ ಕಾರಣಕ್ಕೆ ಶಿವಕುಮಾರ್ ಮನೆಗೆ ನುಗ್ಗಿ ಅನ್ಯಕೋಮಿನ ಗುಂಪಿನಿಂದ ಹಲ್ಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಹಲ್ಲೆ ನಡೆಸಿದವರು ನಾಪತ್ತೆಯಾಗಿದ್ದಾರೆ. ಇದೀಗ ಪೊಲೀಸರು ಅರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ವೀಟ್ ಡಿಲೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ : ಇನ್ನು ಗಲಾಟೆ ನಡೆದ ಕೆಲವೇ ಗಂಟೆಗಳಲ್ಲಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು. “wakeup Hindus” ಎಂದು ಟ್ವಿಟ್ ಮಾಡಿದ್ದರು. ಗಲಾಟೆ ವೇಳೆ ಸೆರೆ ಹಿಡಿಯಲಾದ ದೃಶ್ಯ ಸಮೇತ ಟ್ವೀಟ್ ಮಾಡಿ ಈ ಘಟನೆ ನಡೆದಿರುವುದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ. ಈ ಘಟನೆಯ ವಿಚಾರ ನಗರ ಪೊಲೀಸ್ ಆಯುಕ್ತ ದಯಾನಂದರ ಗಮನಕ್ಕೂ ತಂದಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಸಂಸದ ಟ್ವೀಟ್ ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ರಾತ್ರೋರಾತ್ರಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಪೊಲೀಸರ ಪರಿಶೀಲನೆ ವೇಳೆ ಕೋಮು ಸಂಘರ್ಷದ ಬಗ್ಗೆ ಮಾಹಿತಿ ಇಲ್ಲ : ಘಟನೆ ಸಂಬಂಧ ಪೊಲೀಸರು ಮಾಹಿತಿ ನೀಡಿದ್ದಾರೆ. ಹಲ್ಲೆಗೊಳಗಾದವರು ಹಾಗೂ ಹಲ್ಲೆ ಮಾಡಿದ್ದಾರೆ ಎನ್ನಲಾದ ಸೈಯಿದ್ ತಾಹ ಅಕ್ಕಪಕ್ಕದ ಮನೆಯವರು. ಎರಡು ಕುಟುಂಬಗಳು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈವರೆಗಿನ ತನಿಖೆಯಲ್ಲಿ ಯಾವುದೇ ಕೋಮು ಆಯಾಮ ಕಂಡು ಬಂದಿಲ್ಲ. ಘಟನೆ ನಡೆದ ಸ್ಥಳದ ಸ್ವಲ್ಪ ದೂರದಲ್ಲೇ ಮಸೀದಿ ಇದೆ. ಹೀಗಾಗಿ ನಮಾಜ್ ಗೆಂದು ಬಂದವರು ಸಹ ಗಲಾಟೆ ವೇಳೆ ಅಲ್ಲಿ ಸೇರಿದ್ದರು. ಆ ಬಗ್ಗೆ ಸಹ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿಯ 5ನೇ ಪಟ್ಟಿ ಬಿಡುಗಡೆ : ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಕಣಕ್ಕೆ, ಅನಂತ್ಕುಮಾರ್ ಹೆಗಡೆಗೆ ಕೈತಪ್ಪಿದ ಟಿಕೆಟ್..!