ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್ – ಜುಲೈನಿಂದ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ!

ಬೆಂಗಳೂರು : ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2024ರ ಮಧ್ಯಭಾಗದಲ್ಲೇ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಶುರುವಾಗಬೇಕಿತ್ತು. ಆದರೆ, ಅದು 2025ಕ್ಕೆ ಮುಂದೂಡಲ್ಪಟ್ಟಿತ್ತು. ನಂತರ 2025ರ ಮೇ ಅಂತ್ಯಕ್ಕೆ ಅಥವಾ ಜೂನ್​​ ತಿಂಗಳಲ್ಲಿ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟ ಶುರುವಾಗಬಹುದು ಎನ್ನಲಾಗಿತ್ತು. ಇದೀಗ ಜುಲೈನಲ್ಲಿಯೇ ಹಳದಿ ಮಾರ್ಗದ ಮೆಟ್ರೋ ಸಂಚರಿಸಲಿದೆ ಎಂದು ಬಿಎಂಆರ್​​ಸಿಎಲ್​​ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಸ್ವತಂತ್ರ ಮೌಲ್ಯಮಾಪನ ಪ್ರಮಾಣ ಪತ್ರ ಸಿಗದಿದ್ದ ಕಾರಣ ಹಳದಿ ಮಾರ್ಗದ ಮೆಟ್ರೋ ಕಾರ್ಯಾರಂಭ ಮತ್ತಷ್ಟು ವಿಳಂಬವಾಗಿದ್ದು, ಜೂನ್ ಬದಲು ಜುಲೈನಲ್ಲಿ ಸಂಚಾರ ಆರಂಭಿಸಲು BMRCL ಸಿದ್ದತೆ ಮಾಡಿಕೊಂಡಿದೆ.

ಒಂದು ವರ್ಷದ ಹಿಂದೆಯೇ ಹಳದಿ ಮಾರ್ಗದ ಮೆಟ್ರೋ ಕಾಮಗಾರಿ ಪೂರ್ಣವಾಗಿತ್ತು. ಇದೀಗ ಬೊಮ್ಮಸಂದ್ರ-ಆರ್.ವಿ ರಸ್ತೆ ನಡುವಿನ ಹಳದಿ ಮಾರ್ಗದ ಮೆಟ್ರೋ ಸಂಚಾರ ಜುಲೈನಿಂದ ಕಾರ್ಯಾರಂಭ ಸಜ್ಜಾಗಿದೆ. ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇನ್ಫೋಸಿಸ್ ಫೌಂಡೇಶನ್, ಎಲೆಕ್ಟ್ರಾನ್ ಸಿಟಿ ಮಾರ್ಗದಿಂದ ಆರ್.ವಿ ರಸ್ತೆ ನಿಲ್ದಾಣದವರೆಗೂ ಸುಮಾರು 18.8 ಕಿ.ಮೀ ಉದ್ದದ ಸಂಚಾರವನ್ನು ಒಳಗೊಂಡಿದೆ.

ಹಳದಿ ಮಾರ್ಗದ ಕಾರ್ಯಾಚರಣೆಗೆ ಅಗತ್ಯವಿರುವ ಆರು ರೈಲುಗಳ ಪೈಕಿ ಮೂರು ರೈಲುಗಳು ಈಗಾಗಲೇ ಬೆಂಗಳೂರಿಗೆ ಬಂದಿವೆ. ಇವೆಲ್ಲ ಚೀನಾದಿಂದ ಬಂದವುಗಳಾಗಿವೆ. ರೈಲು ಪೂರೈಸುವ ಗುತ್ತಿಗೆ ಪಡೆದಿರುವ ಟಿಟಾಘರ್ ರೈಲ್ ಸಿಸ್ಟಂ ಲಿಮಿಟೆಡ್ ನಿಗದಿತ ಅವಧಿಯೊಳಗೆ ಎಲ್ಲ ರೈಲುಗಳನ್ನು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಇದೂ ಸಹ ಹಳದಿ ಮಾರ್ಗದ ಕಾರ್ಯಾಚರಣೆ ವಿಳಂಬಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಮಹಾಮಾರಿ ಕೊರೊನಾಗೆ 3ನೇ ಬಲಿ – ಟೆಸ್ಟಿಂಗ್ ಕಡ್ಡಾಯಗೊಳಿಸಿದ ಕೇಂದ್ರ!

Btv Kannada
Author: Btv Kannada

Read More