ಬಮೂಲ್​ ಚುನಾವಣೆಯಲ್ಲಿ ಕಾಂಗ್ರೆಸ್​ ಮೇಲುಗೈ – 10 ಕ್ಷೇತ್ರಗಳಲ್ಲಿ ‘ಕೈ’ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು!

ಬೆಂಗಳೂರು : ಕಾರ್ಯಕರ್ತರ ನಡುವೆ ವಾಕ್ಸಮರ, ಪರಸ್ಪರ ದಿಕ್ಕಾರ ಮತ್ತು ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಸೇರಿ ಹಲವು ರೋಚಕತೆಗಳಿಂದ ಕೂಡಿದ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ(ಬಮೂಲ್)ದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ನಗರದ ಡೈರಿ ವೃತ್ತದಲ್ಲಿರುವ ಐಟಿಐ ಕಾಲೇಜಿನಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ 14 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, 4 ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಬೆಂಗಳೂರು ನಗರ, ಗ್ರಾಮಾಂತರ, ಮತ್ತು ರಾಮನಗರ ಒಳಗೊಂಡಂತೆ ರಚನೆಯಾಗಿರುವ ಬಮೂಲ್‌ 2025-2030ರ ಅವಧಿಯ ಆಡಳಿತ ಮಂಡಳಿಯ ಒಟ್ಟು 14 ನಿರ್ದೇಶಕರ ಪೈಕಿ ಕನಕಪುರ ಕ್ಷೇತ್ರದಿಂದ ಮಾಜಿ ಸಂಸದ ಡಿ.ಕೆ.ಸುರೇಶ್, ಕುದೂರು ಕ್ಷೇತ್ರದಿಂದ ರಾಜಣ್ಣ ಮತ್ತು ಆನೇಕಲ್ ಕ್ಷೇತ್ರದಿಂದ ಆರ್.ಕೆ. ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ಅಧ್ಯಕ್ಷರಾಗಿ ಡಿ.ಕೆ.ಸುರೇಶ್ ಆಯ್ಕೆಯಾಗುವ ಸಾಧ್ಯತೆ ಇದೆ.

ಫಲಿತಾಂಶದ ವೇಳೆ ಬಿಜೆಪಿ-ಕಾಂಗ್ರೆಸ್‌ ವಾಗ್ಯುದ್ಧ : ಮತದಾನ ಎಣಿಕೆ ನಡೆಯುತ್ತಿದ್ದ ಸ್ಥಳಕ್ಕೆ ಡಿ.ಕೆ.ಸುರೇಶ್ ಬಂದಿರುವ ಕುರಿತು ರಾಮನಗರದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ನಡುವೆ ಗಲಾಟೆ ನಡೆಯಿತು. ಸುರೇಶ್ ಜೊತೆ ಬಂದಿರುವ ಮುಖಂಡರ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ಮಾತುಕತೆ ನಡೆದಿದ್ದು, ಈ ವೇಳೆ ಮೋದಿ ಪರವಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿರುವ ಪ್ರಸಂಗ ಕೂಡ ನಡೆಯಿತು.

ಬಮೂಲ್ ಚುನಾವಣ ಫಲಿತಾಂಶ

  • ಹೊಸಕೋಟೆ – ಸತೀಶ್‌ಗೌಡ(ಕಾಂಗ್ರೆಸ್)
  • ಚನ್ನಪಟ್ಟಣ – ಲಿಂಗೇಶ್ ಕುಮಾರ್(ಕಾಂಗ್ರೆಸ್)
  • ನೆಲಮಂಗಲ – ಭವಾನಿ ಶಂಕರ್ ಬೈರೇಗೌಡ(ಎನ್‌ಡಿಎ)
  • ಬೆಂಗಳೂರು ದಕ್ಷಿಣ – ಕೆ.ಎಂ.ಕೃಷ್ಣಯ್ಯ(ಕಾಂಗ್ರೆಸ್)
  • ದೇವನಹಳ್ಳಿ – ಎಸ್.ಪಿ.ಮುನಿರಾಜು(ಕಾಂಗ್ರೆಸ್)
  • ಹಾರೋಹಳ್ಳಿ – ಹರೀಶ್ ಕುಮಾರ್(ಕಾಂಗ್ರೆಸ್)
  • ರಾಮನಗರ – ಪಿ.ನಾಗರಾಜು( ಕಾಂಗ್ರೆಸ್)
  • ಮಾಗಡಿ – ಎಚ್.ಎನ್.ಅಶೋಕ್( ಕಾಂಗ್ರೆಸ್)
  • ದೊಡ್ಡಬಳ್ಳಾಪುರ – ಬಿ.ಸಿ.ಆನಂದ್ (ಬಿಜೆಪಿ)
  • ಬೆಂಗಳೂರು ಪೂರ್ವ – ಎಂ.ಮಂಜುನಾಥ್( ಎನ್‌ಡಿಎ)
  • ಬೆಂಗಳೂರು ಉತ್ತರ – ಸತೀಶ್ ಕೆ.ಆರ್.ಕಡತನಮಲೆ( ಎನ್‌ಡಿಎ)
  • ಕನಕಪುರ – ಡಿ.ಕೆ.ಸುರೇಶ್( ಕಾಂಗ್ರೆಸ್)
  • ಕುದೂರ – ರಾಜಣ್ಣ (ಕಾಂಗ್ರೆಸ್)
  • ಆನೇಕಲ್ – ಆರ್.ಕೆ.ರಾಮೇಶ್( ಕಾಂಗ್ರೆಸ್)

ಇದನ್ನೂ ಓದಿ : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆ – ಆರೋಗ್ಯ ಇಲಾಖೆ ಫುಲ್ ಅಲರ್ಟ್​.. ಟೆಸ್ಟಿಂಗ್ ಹೆಚ್ಚಳ!

Btv Kannada
Author: Btv Kannada

Read More