ಬೆಳಗಾವಿ : ಜಿಲ್ಲೆಯ ಮೇಕಳಿ ಗ್ರಾಮದಲ್ಲಿರುವ ರಾಮ ಮಠದ ಲೋಕೇಶ್ವರ ಸ್ವಾಮೀಜಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಅಪ್ರಾಪ್ತ ಬಾಲಕಿ ಲೋಕೇಶ್ವರ ಸ್ವಾಮೀಜಿ ಮೇಲೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಕಾಮುಕ ಸ್ವಾಮೀಜಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮೊದಲಿಗೆ ಮನೆ ಕಡೆಗೆ ಹೋಗುತ್ತಿದ್ದ ಬಾಲಕಿಯನ್ನು ‘ನಿಮ್ಮ ಮನೆಗೆ ಹೊಗುತ್ತಿದ್ದೇನೆ ಬಾ’ ಎಂದು ಹೇಳಿ ಸ್ವಾಮೀಜಿ ಕಾರು ಹತ್ತಿಸಿಕೊಂಡಿದ್ದಾರೆ. ಕುಟುಂಬಕ್ಕೆ ಪರಿಚಯಸ್ಥ ಸ್ವಾಮೀಜಿ ಎಂದು ಬಾಲಕಿ ಕಾರು ಹತ್ತಿದ್ದಳು. ಆದ್ರೆ ಮನೆ ಬಂದ್ರು ಕೂಡ ಕಾರು ನಿಲ್ಲಿಸದೇ ಬೆಳಗಾವಿಯಿಂದ, ಬಾಗಲಕೋಟೆ ಮೂಲಕ ರಾಯಚೂರಿನತ್ತ ಬಾಲಕಿಯನ್ನು ಸ್ವಾಮೀಜಿ ಕರೆದುಕೊಂಡು ಹೋಗಿದ್ದಾನೆ.
ಆನಂತರ ರಾಯಚೂರು ನಗರದ ಲಾಡ್ಜ್ ಒಂದರಲ್ಲಿ 2 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕಾಮುಕ ಸ್ವಾಮೀಜಿ ಒತ್ತಾಯ ಪೂರ್ವಕವಾಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬಳಿಕ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದಾನೆ. ಇನ್ನು ಈ ವಿಷಯ ಯಾರಿಗೂ ಹೇಳಕೂಡದು. ಹೇಳಿದ್ರೆ ನಿನ್ನನ್ನು ಜೀವಸಮೇತ ಉಳಿಸಲ್ಲ ಎಂದು ಲೋಕೇಶ್ವರ ಸ್ವಾಮೀಜಿ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದಾನೆ.
ಘಟನೆಯಿಂದ ನೊಂದ ಬಾಲಕಿ ಕೊನೆಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಬಾಲಕಿ ಪೋಷಕರು ಮೂಡಲಗಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ದೂರಿನನ್ವಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಕಾಮುಕ ಸ್ವಾಮೀಜಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹೆಬ್ಬಾಳ ಫ್ಲೈಓವರ್ನಲ್ಲಿ ಮಿಡ್ನೈಟ್ ಭೀಕರ ಸರಣಿ ಅಪಘಾತ – ಓರ್ವ ದುರ್ಮರಣ!
