ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋ‍ಷಿಸಿದ ರೋಹಿತ್ ಶರ್ಮಾ!

ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋ‍ಷಿಸಿದ್ದಾರೆ. ತಕ್ಷಣದಿಂದಲೇ ಅವರು ನಿವೃತ್ತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಈಗಾಗಲೇ ಶರ್ಮಾ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಇದೀಗ ಏಕದಿನ ಮಾದರಿಯಲ್ಲಿ ಮಾತ್ರ ಸ್ಫೋಟಕ ಬ್ಯಾಟ್ಸ್‌ಮನ್‌ ಅಬ್ಬರಿಸಲಿದ್ದಾರೆ.

2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಇಬ್ಬರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಟೆಸ್ಟ್‌ ಮಾದರಿಯಿಂದಲೂ ನಿವೃತ್ತಿ ಪಡೆಯುವುದಾಗಿ 38 ವರ್ಷದ ಶರ್ಮಾ ಹೇಳಿದ್ದಾರೆ.

2024-25ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಇದಕ್ಕೀಗ ಭಾರತ ತಂಡದ ನಾಯಕ ತೆರೆ ಎಳೆದಿದ್ದಾರೆ.

ರೋಹಿತ್ ಶರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು, “ಎಲ್ಲರಿಗೂ ನಮಸ್ಕಾರ, ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ. ಬಿಳಿ ಬಣ್ಣದ ಜೆರ್ಸಿಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ಒಂದು ದೊಡ್ಡ ಗೌರವ. ವರ್ಷಗಳಿಂದ ನೀವು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಾನು ಒಡಿಐ ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ,” ಎಂದು ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ‘ಆಪರೇಷನ್‌ ಸಿಂಧೂರ’ಕ್ಕೆ ಉಗ್ರ ಮಸೂದ್ ಅಜರ್ ಕುಟುಂಬದ 14 ಮಂದಿ ಬಲಿ!

Btv Kannada
Author: Btv Kannada

Read More