18 ಶಾಸಕರ ಅಮಾನತು ಪ್ರಕರಣ – ಸ್ಪೀಕರ್‌ ವಿರುದ್ಧ ಕೋರ್ಟ್‌ ಮೊರೆ ಹೋಗಲು ಮುಂದಾದ ಬಿಜೆಪಿ!

ಬೆಂಗಳೂರು : ಕಳೆದ ಮಾರ್ಚ್​ನಲ್ಲಿ ನಡೆದ ಕರ್ನಾಟಕ ಬಜೆಟ್‌ ಅಧಿವೇಶನದ ಕೊನೆಯ ದಿನದಂದು ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ 18 ಬಿಜೆಪಿಯ ಶಾಸಕರನ್ನು ವಿಧಾನಸಭೆಯಿಂದ 6 ತಿಂಗಳ ಕಾಲ ಅಮಾನತು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ಪೀಕರ್ ಯು.ಟಿ ಖಾದರ್ ಅವರನ್ನು ವಿಪಕ್ಷ ನಾಯಕ ಆರ್.ಅಶೋಕ್ ಅವರು ಭೇಟಿಯಾಗಲಿದ್ದಾರೆ.

ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಆರ್. ಅಶೋಕ್ ನೇತ್ರತ್ವದ ನಿಯೋಗ ಇಂದು ಬೆಳಗ್ಗೆ 11 ಗಂಟೆಗೆ ಯು.ಟಿ ಖಾದರ್ ಅವರನ್ನು ಭೇಟಿಯಾಗಲಿದೆ. ಈ ವೇಳೆ ಶಾಸಕರ ಅಮಾನತ್ತು ಪ್ರಕರಣ ವಾಪಸ್ ಪಡೆಯಲು ಆರ್. ಅಶೋಕ್ ಅವರು ಮನವಿ ಮಾಡಲಿದ್ದಾರೆ.

ಶಾಸಕರ ಅಮಾನತು ವಾಪಸ್ ಪಡೆಯುವಂತೆ ಈಗಾಗಲೇ ಸ್ಪೀಕರ್‌ಗೆ ಮನವಿ ಸಲ್ಲಿಸಲಾಗಿತ್ತು. ಮನವಿ ಕೊಟ್ರೂ ಇದುವರೆಗೂ ಸ್ಪೀಕರ್ ಸ್ಪಂದಿಸಿಲ್ಲ. ಹಾಗಾಗಿ ಇಂದು ಸ್ಪೀಕರ್ ಜೊತೆ ಆರ್. ಅಶೋಕ್ ನೇತ್ರತ್ವದಲ್ಲಿ ಅಮಾನತಾದ ಶಾಸಕರ ಸಭೆ ನಡೆಯಲಿದೆ. ಸ್ಪೀಕರ್ ನಿರ್ಧಾರಕ್ಕೆ ಬೇಸರಗೊಂಡಿರೋ ಶಾಸಕರು, ಇಂದಿನ ಸಭೆ ವಿಫಲವಾದರೆ ಕೋರ್ಟ್ ಮೆಟ್ಟಿಲೇರಲು ಸಿದ್ದತೆ ಮಾಡಿಕೊಂಡಿದ್ದಾರೆ. ಸ್ಪೀಕರ್ ನಿರ್ಧಾರ ಪ್ರಶ್ನಿಸಲು ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ.

ಪ್ರಕರಣದ ಹಿನ್ನೆಲೆ : ಕರ್ನಾಟಕ ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದರು. ಸಚಿವ ಕೆ .ಎನ್‌. ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ ವಿಚಾರವಾಗಿ ಬಿಜೆಪಿಯಿಂದ ಸದನದಲ್ಲಿ ಗದ್ದಲ ಉಂಟಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಪೀಠದ ಬಳಿ ಹೋಗಿ ಬಿಜೆಪಿ ಶಾಸಕರು ಗದ್ದಲ ಉಂಟು ಮಾಡಿದ್ದರು. ಅಲ್ಲದೆ, ಕಾಗದ ಪತ್ರಗಳನ್ನು ಹರಿದು ಹಾಕಿ ಪೀಠಕ್ಕೆ ಎಸೆದಿದ್ದರು.

ಇದಾದ ಬೆನ್ನಲ್ಲೇ ಸಭಾಧ್ಯಕ್ಷರ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಸಭೆ ನಡೆಸಿದ್ದರು. ಸಭೆಯಲ್ಲಿ ಅಮಾನತು ನಿರ್ಧಾರ ಕೈಗೊಳ್ಳಲಾಗಿತ್ತು. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಸದನ ಮತ್ತೆ ಆರಂಭಗೊಂಡ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಸಭಾಧ್ಯಕ್ಷರು ಪೀಠಕ್ಕೆ ಅಗೌರವ ತೋರಿಸಿದರೆ ಸಹಿಸೋದಿಲ್ಲ. ಈ ನಿಟ್ಟಿನಲ್ಲಿ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗುವುದು ಎಂಬ ಆದೇಶ ಪ್ರಕಟಿಸಿದ್ದರು. ಅಮಾನತುಗೊಂಡ ಶಾಸಕರುಗಳನ್ನು ವಿಧಾನಸಭೆ ಮಾರ್ಷಲ್‌ಗಳು ಹೊರ ಹಾಕಿದ್ದರು.

ಯಾರೆಲ್ಲಾ ಅಮಾನತು : ದೊಡ್ಡಣ್ಣ ಗೌಡ ಪಾಟೀಲ್‌, ಸಿ.ಕೆ.ರಾಮಮೂರ್ತಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ. ಎಸ್. ಆ‌ರ್. ವಿಶ್ವನಾಥ್, ಬೈರತಿ ಬಸವರಾಜ, ಎಂ.ಆರ್.ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಉಮಾನಾಥ್ ಕೋಟ್ಯಾನ್, ಶರಣು ಸಲಗಾ‌ರ್, ಶೈಲೇಂದ್ರ ಬೆಲ್ದಾಳೆ, ಯಶಪಾಲ್‌ ಸುವರ್ಣ, ಹರೀಶ್ ಬಿ.ಪಿ., ಡಾ. ಭರತ್ ಶೆಟ್ಟಿ, ಮುನಿರತ್ನ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಡಾ.ಚಂದ್ರು ಲಮಾಣಿ.

ಇದನ್ನೂ ಓದಿ : ಮಾಜಿ ಸಿಎಂ ಬಿಎಸ್‌ವೈ ವಿರುದ್ಧದ ಭ್ರಷ್ಟಾಚಾರ ಪ್ರಕರಣ – ಇಂದು ಸುಪ್ರೀಂ ಕೋರ್ಟ್​ನಿಂದ ತೀರ್ಪು ಪ್ರಕಟ!

Btv Kannada
Author: Btv Kannada

Read More