ಮಹಿಳಾ ಪ್ರೀಮಿಯರ್ ಲೀಗ್ ಸೀಸನ್-4 (WPL 2026) ಅದ್ಧೂರಿಯಾಗಿ ಆರಂಭಗೊಂಡಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಕಳೆದ ಮೂರು ಸೀಸನ್‌ಗಳಲ್ಲಿ ಮೊದಲ ಪಂದ್ಯದಲ್ಲೇ ಮುಂಬೈ ವಿರುದ್ಧ ಸೋಲುತ್ತಿದ್ದ ಕಳಪೆ ದಾಖಲೆಗೆ ಆರ್‌ಸಿಬಿ ಅಂತಿಮ ಹಾಡಿದೆ.

ಮುಂಬೈ ನೀಡಿದ 155 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಸ್ಮೃತಿ ಮಂದಾನ ಹಾಗೂ ಗ್ರೇಸ್ ಹ್ಯಾರಿಸ್ ಜೋಡಿ 40 ರನ್‌ಗಳ ಉತ್ತಮ ಆರಂಭ ನೀಡಿತು. ಆದರೆ, ಈ ಜೋಡಿ ಬೇರ್ಪಟ್ಟ ನಂತರ ಮುಂಬೈ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ವಿಕೆಟ್‌ಗಳು ಪಟಪಟನೇ ಉರುಳುತ್ತಿದ್ದರೆ, ಮತ್ತೊಂದೆಡೆ ನಾಡಿನ್ ಡಿ ಕ್ಲರ್ಕ್ (Nadine de Klerk) ಏಕಾಂಗಿ ಹೋರಾಟ ನಡೆಸಿದರು. ಪಂದ್ಯದ ಕೊನೆಯ ಓವರ್‌ನವರೆಗೂ ಮುಂಬೈ ಗೆಲುವಿನ ವಿಶ್ವಾಸದಲ್ಲಿತ್ತು.

ಆರ್‌ಸಿಬಿ ಗೆಲುವಿಗೆ ಕೊನೆಯ ಓವರ್‌ನಲ್ಲಿ 18 ರನ್‌ಗಳ ಅವಶ್ಯಕತೆಯಿತ್ತು. ನಟಾಲಿ ಸಿವರ್ ಎಸೆದ ಮೊದಲ ಎರಡು ಎಸೆತಗಳಲ್ಲಿ ರನ್ ಬಾರದಿದ್ದಾಗ ಆರ್‌ಸಿಬಿ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಅಂತಿಮ ನಾಲ್ಕು ಎಸೆತಗಳಲ್ಲಿ 6, 4, 6, 4 ಬಾರಿಸಿದ ನಾಡಿನ್ ಡಿ ಕ್ಲರ್ಕ್, ಅರ್ಧಶತಕದೊಂದಿಗೆ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು. ಕೇವಲ 44 ಎಸೆತಗಳಲ್ಲಿ ಅಜೇಯ 63 ರನ್ (7 ಬೌಂಡರಿ, 2 ಸಿಕ್ಸರ್) ಸಿಡಿಸಿದ ಡಿ ಕ್ಲರ್ಕ್ ಹೋರಾಟಕ್ಕೆ ಅರುಂಧತಿ ರೆಡ್ಡಿ (20) ಮತ್ತು ಪ್ರೇಮಾ ರಾವತ್ (8) ಉತ್ತಮ ಸಾಥ್ ನೀಡಿದರು.

ಇದನ್ನೂ ಓದಿ : ದುಬೈನಲ್ಲಿ ಕನ್ನಡದ ‘ವೈಲ್ಡ್ ಟೈಗರ್ ಸಫಾರಿ’ಯ ಘರ್ಜನೆ – ಸಿನಿಮಾಗೆ ಬಾಲಿವುಡ್ ರೆಮೋ ಡಿ ಸೋಜಾ ಸಾಥ್!







