ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯ – ವ್ಯಕ್ತಿ ಸಾವು.. ಡಾಕ್ಟರ್ ವಿರುದ್ಧ ಆಕ್ರೋಶ!

ಚಿಕ್ಕಮಗಳೂರು : ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವ ಬದಲು ವೈದ್ಯರು ಮೊಬೈಲ್‌ನಲ್ಲಿ ಮಗ್ನರಾದ ಪರಿಣಾಮ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಚಿಕಿತ್ಸೆ ಸಿಗದೆ ಮೃತಪಟ್ಟ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 60 ವರ್ಷದ ಮಂಜುನಾಥ್ ಇಂದು ಬೆಳಗಿನ ಜಾವ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸ್ಟ್ರೆಚ್ಚರ್ ಮೇಲೆ ರೋಗಿ ಉಸಿರಾಟಕ್ಕಾಗಿ ನರಳುತ್ತಿದ್ದರೂ, ಕರ್ತವ್ಯದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡದೆ ಮೊಬೈಲ್ ಫೋನ್‌ನಲ್ಲಿ ಮಗ್ನರಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ಬಂದ ಒಂದು ಗಂಟೆಯವರೆಗೆ ಪ್ರಾಥಮಿಕ ಚಿಕಿತ್ಸೆಯೂ ಸಿಗದೆ ರೋಗಿ ಪರದಾಡುವಂತಾಯಿತು.

ಕುಟುಂಬಸ್ಥರ ಎಷ್ಟೇ ಮನವಿ ಮಾಡಿದರೂ ವೈದ್ಯರು ಮತ್ತು ಸಿಬ್ಬಂದಿ ತಕ್ಷಣ ಸ್ಪಂದಿಸಲಿಲ್ಲ. ಪರಿಸ್ಥಿತಿ ಗಂಭೀರವಾದ ಬಳಿಕವಷ್ಟೇ ಅವರನ್ನು ಐಸಿಯು (ICU) ಘಟಕಕ್ಕೆ ದಾಖಲಿಸಿದರು. ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಮಂಜುನಾಥ್ ಅವರು ಚಿಕಿತ್ಸೆ ಫಲಿಸದೆ ಬೆಳಿಗ್ಗೆ ಮೃತಪಟ್ಟಿದ್ದಾರೆ.

ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ‘ದೇವನೊಬ್ಬ ಜಾದೂಗಾರ’ ಟೀಸರ್ ರಿಲೀಸ್ – ಹೊಸ ತಂಡಕ್ಕೆ ಸಿಂಪಲ್ ಸುನಿ ಸಾಥ್!

Btv Kannada
Author: Btv Kannada