ಮಂತ್ರಾಲಯದ ರಾಯರ ಮಠಕ್ಕೂ ತಟ್ಟಿದ ಭಾಷಾ ಸಂಘರ್ಷ – ಕನ್ನಡದ ಶ್ಲೋಕ ಫಲಕಕ್ಕೆ ತೆಲುಗು ಭಾಷಿಗರ ತೀವ್ರ ವಿರೋಧ!

ಮಂತ್ರಾಲಯ : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾಷಾ ವಿವಾದ ಭುಗಿಲೆದ್ದಿದೆ. ಮಠದ ಮುಖ್ಯ ದ್ವಾರದಲ್ಲಿರುವ ಕನ್ನಡದ ಶ್ಲೋಕ ಫಲಕಕ್ಕೆ ಆಂಧ್ರಪ್ರದೇಶದ ತೆಲುಗು ಭಾಷಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಠದ ಪ್ರವೇಶ ದ್ವಾರದಲ್ಲಿ ರಾಯರ ಪ್ರಸಿದ್ಧ ಶ್ಲೋಕವಾದ “ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ…” ಶ್ಲೋಕವನ್ನು ಕನ್ನಡದಲ್ಲಿ ಬರೆಯಲಾಗಿದೆ. ಮಂತ್ರಾಲಯವು ಕರ್ನಾಟಕದ ರಾಯಚೂರು ಗಡಿಭಾಗದಲ್ಲಿದ್ದರೂ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗೆ ಸೇರಿರುವುದರಿಂದ, ಇಲ್ಲಿ ತೆಲುಗು ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸ್ಥಳೀಯ ಭಕ್ತರು ವಾದಿಸುತ್ತಿದ್ದಾರೆ.

ಕನ್ನಡದ ಫಲಕವನ್ನು ವಿರೋಧಿಸಿರುವ ತೆಲುಗು ಭಾಷಿಗರು ಸಾಮಾಜಿಕ ಜಾಲತಾಣಗಳಲ್ಲಿ ಮಠದ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಈ ಫೋಟೋಗಳನ್ನು ಟ್ಯಾಗ್ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ನೆಲದಲ್ಲಿ ಕನ್ನಡಕ್ಕೆ ಯಾಕೆ ಪ್ರಾಮುಖ್ಯತೆ? ಎಂದು ಪ್ರಶ್ನಿಸುತ್ತಿರುವ ನೆಟ್ಟಿಗರು, ಕೂಡಲೇ ಕನ್ನಡದ ನಾಮಫಲಕದ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತೆಲುಗು ಫಲಕ ಅಳವಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ : ನಾಗ್ಪುರದಲ್ಲಿ ಪತಿ ಸೂರಜ್ ಆತ್ಮಹತ್ಯೆ – ಗಾನವಿ ಕುಟುಂಬಸ್ಥರ ವಿರುದ್ಧವೇ ದೂರು ದಾಖಲು!

Btv Kannada
Author: Btv Kannada