ಶಬರಿಮಲೆ : ಮಾನವ ಸೇವೆಯೇ ಮಾಧವ ಸೇವೆ ಎಂಬುದಕ್ಕೆ ಶಬರಿಮಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಚೆನ್ನೈ ಮೂಲದ ಭಕ್ತರೊಬ್ಬರು ಉಸಿರಾಟದ ಸಮಸ್ಯೆಯಿಂದ ಕುಸಿದು ಬಿದ್ದಾಗ, ಕುಂದಾಪುರದ ಪ್ರಭಾಕರ್ ಶೆಟ್ಟಿ ಸಮಯಪ್ರಜ್ಞೆಯಿಂದ ಅವರ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಡಿಸೆಂಬರ್ 18ರಂದು ಶಬರಿಮಲೆಯ ನೀಲಮಲೈ ಏರ್ತಿದ್ದ ಹಾದಿಯಲ್ಲಿ ಈ ಘಟನೆ ನಡೆದಿದೆ. ಬೆಟ್ಟ ಹತ್ತುತ್ತಿದ್ದ ಚೆನ್ನೈ ಮೂಲದ ಮಾಲಾಧಾರಿಯೊಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಅಲ್ಲಿಗೆ ಬಂದ ಮೂಲತಃ ಕುಂದಾಪುರದ ಮಾರಣಕಟ್ಟೆ ನಂದರವಳ್ಳಿಯವರಾದ, ಪ್ರಸ್ತುತ ಬೆಳಗಾವಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಪ್ರಭಾಕರ್ ಶೆಟ್ಟಿ ಅವರು ಕೂಡಲೇ ಕಾರ್ಯಪ್ರವೃತ್ತರಾದರು. ಅವರು ಅಸ್ವಸ್ಥ ವ್ಯಕ್ತಿಗೆ ಸಿಪಿಆರ್ (CPR) ಮಾಡುವ ಮೂಲಕ ಹೃದಯ ಬಡಿತ ಮರುಕಳಿಸುವಂತೆ ಮಾಡಿ, ಇನ್ನೇನು ವ್ಯಕ್ತಿ ಸತ್ತೇ ಬಿಡ್ತಾನೆ ಅನ್ನೋ ಟೈಮಲ್ಲಿ ಪ್ರಾಣ ಉಳಿಸಿದ್ದಾರೆ.
ನಾನಿನಗಿದ್ದರೆ ನೀನನಗೆ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸಿದ ಪ್ರಭಾಕರ್ ಶೆಟ್ಟಿ, ಇತರ ಮಾಲಾಧಾರಿಗಳ ನೆರವಿನಿಂದ ಅಸ್ವಸ್ಥ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಚೆನ್ನೈ ಮೂಲದ ಮಾಲಾಧಾರಿ ಪ್ರಾಣಾಪಾಯದಿಂದ ಪಾರಾಗಿದ್ದು, ಬದುಕಿದೆಯಾ ಬಡಜೀವ ಎಂದು ನಿರಾಳರಾಗಿದ್ದಾರೆ.

ಪ್ರಭಾಕರ್ ಶೆಟ್ಟಿಯವರ ಈ ಮಾನವೀಯ ಕಾರ್ಯಕ್ಕೆ ಭಕ್ತಾದಿಗಳು, ಆಸ್ಪತ್ರೆ ಸಿಬ್ಬಂದಿ ಹಾಗೂ ಸಂತ್ರಸ್ತನ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಕಠಿಣ ಹಾದಿಯಲ್ಲಿ ಅಯ್ಯಪ್ಪನೇ ಪ್ರಭಾಕರ್ ಶೆಟ್ಟಿ ಅವರ ರೂಪದಲ್ಲಿ ಬಂದು ತನ್ನ ಭಕ್ತನನ್ನು ಕಾಪಾಡಿದ್ದಾನೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ – ಟಿಪ್ಪರ್ ಅಟ್ಟಹಾಸಕ್ಕೆ ನಾಲ್ವರು ಯುವಕರು ಬಲಿ!







