ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಳಿಗಾಲದ ನಡುವೆಯೇ ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ. ನಾಟಿಕೋಳಿ, ಮಟನ್‌ಗಿಂತಲೂ ನುಗ್ಗೆಕಾಯಿ ದುಬಾರಿಯಾಗುವ ಮೂಲಕ ಜನರ ನಿದ್ದೆಗೆಡಿಸಿದೆ. ಹಾಗಾಗಿ ಗ್ರಾಹಕರು “ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ” ಎನುತ್ತಿದ್ದಾರೆ. ಸದ್ಯ ತರಕಾರಿ ಮಾರುಕಟ್ಟೆಗಳಲ್ಲಿ ನುಗ್ಗೆಕಾಯಿಗೆ ಭಾರೀ ಡಿಮ್ಯಾಂಡ್ ಹೆಚ್ಚಾಗಿದ್ದು, ನಗರದಲ್ಲಿ 1 ಕೆಜಿ ನುಗ್ಗೆಕಾಯಿ ಬೆಲೆ 700 ರೂ. ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಒಂದು ನುಗ್ಗೆಕಾಯಿಗೆ 100 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ನಾಟಿಕೋಳಿ ಮತ್ತು ಮಟನ್ ಬೆಲೆಯನ್ನೂ ಮೀರಿಸಿದ್ದು, ಇದೀಗ ನಾಟಿಕೋಳಿ, ಮಟನ್ ಬೆಲೆಯನ್ನೇ ನುಗ್ಗೆಕಾಯಿ ಬೀಟ್ ಮಾಡಿದೆ. ಕಳೆದ ಮೂರು ದಿನಗಳಿಂದ ನುಗ್ಗೆಕಾಯಿ ದರವು ಏರುತ್ತಿದೆ. ಆರಂಭಿಕ ಬೆಲೆಯೇ ಕೆ.ಜಿ.ಗೆ 500 ರೂಪಾಯಿ ಇದೆ. ರೈತರೇ ನಮಗೆ 400 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಹೀಗಾಗಿ ನಾವು ಲಾಭ ಇಟ್ಟುಕೊಂಡು ಈ ದರಕ್ಕೆ ಮಾರಾಟ ಮಾಡಬೇಕಾಗಿದೆ.
ಚಳಿಗಾಲದಲ್ಲಿ ನುಗ್ಗೆಕಾಯಿ ಇಳುವರಿಯೂ ಕಡಿಮೆ. ಹಾಗಾಗಿ ರಾಜ್ಯದಲ್ಲಿ ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ. ತಮಿಳುನಾಡಿನಲ್ಲಿ ಬೆಳೆ ತಡವಾಗಿರುವುದು ಮತ್ತು ಇತ್ತೀಚಿನ ಚಂಡಮಾರುತದ ಪರಿಣಾಮದಿಂದ ನುಗ್ಗೆಕಾಯಿ ಪೂರೈಕೆ ಕಡಿಮೆಯಾಗಿರುವುದು ದರ ಏರಿಕೆ ಪ್ರಮುಖ ಕಾರಣ ಎನ್ನಲಾಗಿದೆ. ನುಗ್ಗೆಕಾಯಿ ದುಬಾರಿಯಾಗಿರುವುದರಿಂದ ಕೆಲ ಮಾರಾಟಗಾರರು ಇದನ್ನು ತಂದು ಮಾರಾಟ ದುಬಾರಿ ದರಕ್ಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಈ ಹಿಂದೆ ಟೊಮೊಟೋ, ಈರುಳ್ಳಿ ದರಗಳು ಹೆಚ್ಚಾಗಿ ಬೆಲೆ ಏರಿಕೆ ಸಾಲಿನಲ್ಲಿರುತ್ತಿದ್ದವು. ಆದರೆ ಈಗ ನುಗ್ಗೆಕಾಯಿ ದರ ನೋಡಿ ಜನ ಹೆದರುವಂತಾಗಿದೆ. ಪ್ರತಿದಿನವೂ ಸುಮಾರು 100 ಟನ್ ನುಗ್ಗೆಕಾಯಿ ಮಾರುಕಟ್ಟೆಗಳಿಗೆ ಪೂರೈಕೆ ಆಗುತ್ತಿತ್ತು. ಆದರೆ ಇತ್ತೀಚಿನ ಹವಾಮಾನ ವೈಪರೀತ್ಯದಿಂದ ನುಗ್ಗೆಕಾಯಿ ಬೆಳೆ ಭಾರೀ ಹೊಡೆತ ತಿಂದಿದೆ. ಇದರಿಂದ ಮಾರುಕಟ್ಟೆಗಳಿಗೆ ನುಗ್ಗೆಕಾಯಿ ಪೂರೈಕೆ ಕಡಿಮೆಯಾಗಿದೆ.
ಇದನ್ನೂ ಓದಿ : ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ – ನಾಲ್ವರು ಸ್ಥಳದಲ್ಲೇ ಸಾವು!







