ಕರ್ನಾಟಕ ಹೈಕೋರ್ಟ್‌ಗೆ ಐತಿಹಾಸಿಕ ಹೆಗ್ಗಳಿಕೆ – ನ್ಯಾ. ಎಂ. ನಾಗಪ್ರಸನ್ನ ಅವರಿಂದ 6 ವರ್ಷಗಳಲ್ಲಿ 22 ಸಾವಿರ ಕೇಸ್ ವಿಲೇವಾರಿ!

ಬೆಂಗಳೂರು : ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕೇವಲ ಆರು ವರ್ಷಗಳ ಅವಧಿಯಲ್ಲಿ 22,000 ವಿವಿಧ ನಮೂನೆಗಳ ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ದೇಶದ ಹೈಕೋರ್ಟ್ ನ್ಯಾಯಮೂರ್ತಿಗಳ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ ದೇಶದ ಮೊದಲ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಬುಧವಾರದಂದು (ನವೆಂಬರ್ 26) ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ತಮ್ಮ ಆರು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಂತಹ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿ, ಕರ್ನಾಟಕ ಹೈಕೋರ್ಟ್‌ನ ಮೊದಲಿಗರು ಎನಿಸಿದ್ದಾರೆ.

ನ್ಯಾ. ನಾಗಪ್ರಸನ್ನ ಅವರು ನೀಡಿದ 22,000 ತೀರ್ಪುಗಳ ಪೈಕಿ, 985 ತೀರ್ಪುಗಳು ಸೂಚಿತ (ರಿಪೋರ್ಟೆಡ್​ ಜಡ್ಜ್​​ಮೆಂಟ್​​) ತೀರ್ಪುಗಳಾಗಿ ಅಧಿಕೃತವಾಗಿ ದಾಖಲಾಗಿವೆ. ಇದು ಅವರ ತೀರ್ಪುಗಳ ಗುಣಮಟ್ಟ ಮತ್ತು ಕಾನೂನು ಮಹತ್ವವನ್ನು ಎತ್ತಿ ತೋರಿಸುತ್ತದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು 2019ರ ನವೆಂಬರ್ 26 ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ನ್ಯಾಯಾಂಗ ಸೇವೆಯ ಅವಧಿಯು 2033ರವರೆಗೂ ಇದೆ. ನ್ಯಾಯಾಂಗ ಕ್ಷೇತ್ರದಲ್ಲಿ ಇಂತಹ ಉತ್ಸಾಹ ಮತ್ತು ದಕ್ಷತೆಯನ್ನು ಪ್ರದರ್ಶಿಸುತ್ತಿರುವ ನ್ಯಾ. ನಾಗಪ್ರಸನ್ನ ಅವರ ಸಾಧನೆಗೆ ಕಾನೂನು ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ : ʻದಿ ಡೆವಿಲ್‌ʼ ಸಿನಿಮಾ ರಿಲೀಸ್​ಗೆ ರೆಡಿ – ಡಿ.11ಕ್ಕೆ ಬಿಗ್‌ ಸ್ಕ್ರೀನ್‌ನಲ್ಲಿ ದರ್ಶನ್‌ ಅಬ್ಬರ!

Btv Kannada
Author: Btv Kannada

Read More