ಕಲಬುರಗಿ : ದಕ್ಷ, ಪ್ರಾಮಾಣಿಕ ಹಿರಿಯ IAS ಅಧಿಕಾರಿ, ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ (KSMCL) ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಅಧಿಕಾರಿ ಮಹಾಂತೇಶ್ ಬೀಳಗಿ ವಿಜಯಪುರದಿಂದ ಕಲಬುರ್ಗಿಗೆ ಇನ್ನೋವಾ ಕಾರಿನಲ್ಲಿ ಬರುತ್ತಿದ್ದಾಗ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಈ ಅಪಘಾತ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಮಹಾಂತೇಶ್ ಬೀಳಗಿ ಅವರ ಜೀವನ ಯುವ ಜನತೆ ಮತ್ತು ಐಎಎಸ್ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿತ್ತು. ಸರಳ ಹಾಗೂ ಸಜ್ಜನಿಕೆಯ IAS ಅಧಿಕಾರಿ ಮಹಾಂತೇಶ್ ಬೀಳಗಿ ಅವರು
ಕಡು ಬಡತನದಿಂದ ಬಂದು ಉನ್ನತ ಸ್ಥಾನಕ್ಕೆ ಏರಿದ್ದರು. ಮಹಾಂತೇಶ್ ಅವರನ್ನು ಅವರ ತಾಯಿ ರೊಟ್ಟಿ ವ್ಯಾಪಾರ ಮಾಡಿ ಸಾಕಿ ಸಲುಹಿದ್ದರು.
ಧಾರವಾಡದ ಕರ್ನಾಟಕ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಡವರ ಪರ ಸೇವೆ, ದಕ್ಷತೆ ಮತ್ತು ಪ್ರಾಮಾಣಿಕತೆಗಾಗಿ ಇಡೀ ಕರ್ನಾಟಕವೇ ಮೆಚ್ಚುವ ಅಧಿಕಾರಿಯಾಗಿ ಹೆಸರು ಗಳಿಸಿದ್ದರು. ದಕ್ಷತೆ, ಪ್ರಾಮಾಣಿಕತೆ ಮತ್ತು ಸಜ್ಜನಿಕೆಗೆ ಹೆಸರಾಗಿದ್ದ, ಜನರ ನೆಚ್ಚಿನ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ಇನ್ನು ನೆನಪು ಮಾತ್ರ.
ಇದನ್ನೂ ಓದಿ : ಮುಖ್ಯಮಂತ್ರಿ ಆಯ್ಕೆಯಲ್ಲಿ ಯಾವುದೇ ’50-50 ಒಪ್ಪಂದ’ ಆಗಿಲ್ಲ – ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ!







