ಮಂಗಳೂರಿನಲ್ಲಿ ಅಕ್ರಮ ಗೋಸಾಗಾಟ.. ಆರೋಪಿ ಮೇಲೆ ಪೊಲೀಸರ ಗುಂಡೇಟು, ಓರ್ವ ವಶ, ಇನ್ನೋರ್ವ ಪರಾರಿ..!

ಮಂಗಳೂರು : ಮಂಗಳೂರು ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸರು ಇಂದು  ಮುಂಜಾನೆ ಕಾರ್ಯಾಚರಣೆ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ, ಜೀಪ್‌ಗೆ ಗುದ್ದಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕರ್ನಾಟಕ-ಕೇರಳ ಗಡಿಭಾಗದ ಈಶ್ವರಮಂಗಳದಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಈಶ್ವರಮಂಗಳದ ಬೆಳ್ಳಿಚಡವಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಈಚರ್ ಲಾರಿಯನ್ನು ಪೊಲೀಸರು ಪತ್ತೆಹಚ್ಚಿದರು.

ಪೊಲೀಸರನ್ನು ಕಂಡ ತಕ್ಷಣ ಗೋಸಾಗಾಟದ ಆರೋಪಿಗಳು ತಮ್ಮ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರು. ಸುಮಾರು 10 ಕಿ.ಮೀ ದೂರದವರೆಗೆ ಪೊಲೀಸರು ಲಾರಿಯನ್ನು ಬೆನ್ನತ್ತಿದ್ದಾರೆ. ಈ ವೇಳೆ ಲಾರಿಯಲ್ಲಿದ್ದ ಆರೋಪಿಗಳು ಪೊಲೀಸರ ಜೀಪ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಅಲ್ಲದೆ, ಪೊಲೀಸ್ ಜೀಪ್‌ಗೆ ತಮ್ಮ ಲಾರಿಯಿಂದ ಗುದ್ದಿ, ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಮತ್ತು ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ, ತಕ್ಷಣ ಪೊಲೀಸರು, ಓರ್ವ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಗುಲಿದ ಪರಿಣಾಮವಾಗಿ ಆರೋಪಿ ಅಬ್ದುಲ್ಲಾ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಕೇರಳದ ಕಾಸರಗೋಡು ನಿವಾಸಿ ಅಬ್ದುಲ್ಲಾ (40) ಎಂದು ಗುರುತಿಸಲಾಗಿದೆ. ಈತನ ಜೊತೆಗಿದ್ದ ಇನ್ನೋರ್ವ ಆರೋಪಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪೊಲೀಸರು ಸೀಜ್ ಮಾಡಿದ ಈಚರ್ ಲಾರಿಯಲ್ಲಿ ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಜಾನುವಾರುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಲಾರಿ ಮತ್ತು ಜಾನುವಾರುಗಳನ್ನು ಸೀಜ್ ಮಾಡಿ, ಬಂಧಿತ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಇದನ್ನು ಓದಿ : ನವೆಂಬರ್​ ಕ್ರಾಂತಿ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್ ​- ಇಂದು ಸರ್ಕಾರಿ ಕಾರ್ಯಕ್ರಮ ರದ್ದುಗೊಳಿಸಿ ಮಂತ್ರಾಲಯಕ್ಕೆ ಡಿಸಿಎಂ!

Btv Kannada
Author: Btv Kannada

Read More