ಗಿರಿನಗರ ಸರಗಳ್ಳತನ ಪ್ರಕರಣ – ಇಬ್ಬರು ಆರೋಪಿಗಳು ಅರೆಸ್ಟ್, 74 ಗ್ರಾಂ ಚಿನ್ನಾಭರಣ ವಶಕ್ಕೆ!

ಬೆಂಗಳೂರು : ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪ್ರವೀಣ್ ಹಾಗೂ ಯೋಗಾನಂದ ಬಂಧಿತ ಆರೋಪಿಗಳು.

ಸೆ.13ರಂದು ರಾತ್ರಿ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಿ ನಗರದಲ್ಲಿ ಕಳ್ಳತನ ನಡೆದಿತ್ತು. ಸರಗಳ್ಳರ ಅಟ್ಟಹಾಸಕ್ಕೆ ಮಹಿಳೆಯ ಕೈಯ ಎರಡು ಬೆರಳು ಕಟ್ ಆಗಿದ್ದವು. ಆರೋಪಿಗಳು ಬಂದು ಮಹಿಳೆಯ ಕತ್ತಿಗೆ ಕೈ ಹಾಕಿ ಸರ ಕಿತ್ತಿದ್ದ. ಆರೋಪಿಗಳ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪ್ರಕರಣ ಸಂಬಂಧ ಗಿರಿನಗರ ಠಾಣಾ ಪೊಲೀಸರು ತನಿಖೆ ನಡೆಸಿ, ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಉಷಾ ಹಾಗೂ ವರಲಕ್ಷ್ಮೀ ಎಂಬುವವರು ಗಣೇಶ ಹಬ್ಬದ ಆರ್ಕಿಸ್ಟ್ರಾ ನೋಡಿ ಮನೆಗೆ ತೆರಳ್ತಿದ್ದರು. ಈ ವೇಳೆ ಆರೋಪಿಗಳು ಪಲ್ಸರ್ ಬೈಕ್​ನಲ್ಲಿ ಹಿಂದಿನಿಂದು ಬಂದು ಮಹಿಳೆಯ ಕುತ್ತಿಗೆಗೆ ಲಾಂಗ್ ಇಟ್ಟಿದ್ದು, ಲಾಂಗ್ ಇಡ್ತಿದ್ದಂತೆ ಉಷಾ ಭಯಗೊಂಡು ಚಿನ್ನದ ಸರ ನೀಡಿದ್ದರು. ನಂತರ ವರಲಕ್ಷ್ಮೀ ಬಳಿ ಚಿನ್ನದ ಸರ ಕೇಳಿದಾಗ ಪ್ರತಿರೋಧ ಒಡ್ಡಿದ್ದರು. ಈ ವೇಳೆ ಕೋಪಗೊಂಡ ಕಿರಾತಕ ಲಾಂಗ್​ನಿಂದ ವರಲಕ್ಷ್ಮೀ ಕೈ ಬೆರಳು ಕತ್ತರಿಸಿದ್ದ. ನಂತರ ಆರೋಪಿಗಳು ಮಹಿಳೆಯಿಂದ ಚಿನ್ನ ಎಗರಿಸಿ ಎಸ್ಕೇಪ್ ಆಗಿದ್ದರು.

ಉಷಾ ಎಂಬಾಕೆಯ 10ಗ್ರಾಂ ಸರ ವರಲಕ್ಷ್ಮೀಯ 45 ಗ್ರಾಂ ಸರ ಕದ್ದು ಪರಾರಿಯಾಗಿದ್ದರು. ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಗಿರಿನಗರ ಪೊಲೀಸರು ಪ್ರತ್ಯೇಕ ತಂಡ ರಚಿಸಿದ್ದರು. ಆರೋಪಿ ಯೋಗಾನಂದ ಈ ಹಿಂದೆ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ. ಆರೋಪಿ ಗಿರಿನಗರದಲ್ಲಿ ಕೃತ್ಯ ಎಸಗಿ ಬೆಂಗಳೂರನ್ನೇ ಬಿಟ್ಟಿದ್ದ. ಪಾಂಡೀಚರಿ, ಮುಂಬೈ, ಗೋವಾಗೆ ತೆರಳಿ ಮೋಜು ಮಸ್ತಿ ಮಾಡ್ತಿದ್ದ.

ಆರೋಪಿ ಯೋಗಾನಂದ ಮದ್ದೂರು ಬಳಿಯ ಮಾರಸಿಂಗನಹಳ್ಳಿ ನಿವಾಸಿಯಾಗಿದ್ದು, ಆತ ಗೋವಾದಿಂದ ಕುಣಿಗಲ್ ಮೂಲಕ ಮಂಡ್ಯದ ಮದ್ದೂರಿಗೆ ಬಂದಿದ್ದ. ಗೋವಾ ಮುಂಬೈ ಸುತ್ತಿ ಇದ್ದ ಹಣವೆಲ್ಲಾ ಖರ್ಚಾ ಮಾಡಿದ್ದ. ಹಣ ಖಾಲಿಯಾದ ಮೇಲೆ ವಾಪಸ್ ತವರು ಊರಿಗೆ ಬಂದಿದ್ದ. ಸದ್ಯ ಗಿರಿನಗರ ಪೊಲೀಸರು ಆರೋಪಿಗಳಿಂದ ಸುಮಾರು 74 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಲಾಂಗ್ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಕತ್ತು ಕೊಯ್ದು ವಿದ್ಯಾರ್ಥಿನಿಯ ಬರ್ಬರ ಹತ್ಯೆ!

Btv Kannada
Author: Btv Kannada

Read More