ದೊಡ್ಡಣ್ಣನಿಗೆ ಆರ್ಥಿಕ ಸಂಕಷ್ಟ : ಅಮೆರಿಕ ಸರ್ಕಾರ ಶಟ್‌ಡೌನ್‌.. 7.50 ಲಕ್ಷ ನೌಕರರಿಗೆ ವೇತನರಹಿತ ಕಡ್ಡಾಯ ರಜೆ ಘೋಷಣೆ!

ವಿಶ್ವದ ದೊಡ್ಡಣ್ಣ ಅಮೇರಿಕ ಇದೀಗ ಹಿಂದೆಂದೂ ಕಾಣದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ಒಂದು ಕಡೆ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಮತ್ತು ವಿರೋಧ ಪಕ್ಷವಾದ ಡೆಮೋಕ್ರಾಟ್‌ಗಳ ನಡುವಿನ ಹಗ್ಗಜಗ್ಗಾಟ, ಮತ್ತೊಂದು ಕಡೆ ಸರ್ಕಾರದ ಬೊಕ್ಕಸಕ್ಕೆ ಬೀಗ ಬಿದ್ದ ಹಿನ್ನೆಲೆಯಲ್ಲಿ ಸರ್ಕಾರ ಶಟ್‌ಡೌನ್ ಆಗಿದೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಯಾವುದೇ ಸರ್ಕಾರಿ ಒಪ್ಪಂದಕ್ಕೆ ಬರಲು ವಿಫಲವಾದ ಪರಿಣಾಮ, ಸರ್ಕಾರದ ಬೊಕ್ಕಸಕ್ಕೆ ಬೀಗ ಬಿದ್ದಿದೆ. ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಈ ಹಿಂದೆ 2018ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯ ಅಧಿಕಾರದಲ್ಲೇ 35 ದಿನಗಳ ಕಾಲ ಕೊನೆಯ ಬಾರಿ ಅಮೇರಿಕಾ ಶಟ್‌ಡೌನ್ ಸಂಭವಿಸಿತ್ತು. ಈಗ ಎಷ್ಟು ದಿನ ಈ ಶಟ್‌ಡೌನ್ ಇರಲಿದೆಯೋ ಎಂಬುದು ಅಮೇರಿಕನ್ನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಸುಮಾರು 7.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಭವಿಷ್ಯ ಅತಂತ್ರವಾಗಿದ್ದು, ಅಮೆರಿಕದಾದ್ಯಂತ ಆತಂಕದ ಕಾರ್ಮೋಡ ಕವಿದಿದೆ.

ಸದ್ಯ ಈ ಆರ್ಥಿಕ ಬಿಕ್ಕಟ್ಟು ಶಮನಗೊಳಿಸುವ ಬದಲು ಅಧ್ಯಕ್ಷ ಟ್ರಂಪ್ ತಮ್ಮ ಎಂದಿನ ಉದ್ದಟತನ ಮುಂದುವರೆಸಿದ್ದಾರೆ. ಬಿಕ್ಕಟ್ಟಿನ ಶಟ್‌ಡೌನ್ ಕಾರಣಕ್ಕೆ ನಾವು ಅನೇಕ ಜನರನ್ನು ಕೆಲಸದಿಂದ ತೆಗೆದುಹಾಕುತ್ತೇವೆ. ಅವರಲ್ಲಿ ಹೆಚ್ಚಿನವರು ಡೆಮೋಕ್ರಾಟ್‌ಗಳಾಗಿರುತ್ತಾರೆ ಎಂದು ಟ್ರಂಪ್ ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಅಮೆರಿಕ ಶಟ್‌ಡೌನ್ ಏನೆಲ್ಲಾ ಎಫೆಕ್ಟ್?

ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳು ಮುಂದುವರಿಯಲಿದ್ದು ಕಾನೂನಿನ ಪ್ರಕಾರ, ಅಗತ್ಯ ಸೇವೆಗಳ ನೌಕರರು ಕೆಲಸ ಮಾಡಲೇಬೇಕು. ಆದರೆ ಅವರಿಗೆ ಶಟ್‌ಡೌನ್ ಮುಗಿಯುವವರೆಗೂ ವೇತನ ಸಿಗುವುದಿಲ್ಲ. ಸೇನಾ ಸಿಬ್ಬಂದಿ, ಗಡಿ ಭದ್ರತಾ ಪಡೆ, ಮತ್ತು ಕಾನೂನು ಜಾರಿ ಸಂಸ್ಥೆಗಳು ಕರ್ತವ್ಯದಲ್ಲಿರುತ್ತವೆ.

ಆಸ್ಪತ್ರೆಗಳಲ್ಲಿನ ವೈದ್ಯಕೀಯ ಆರೈಕೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಮುಂದುವರಿಯುತ್ತದೆ. ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್ ಚೆಕ್‌ಗಳನ್ನು ಫಲಾನುಭವಿಗಳಿಗೆ ಕಳುಹಿಸಲಾಗುತ್ತದೆ. ನಾಸಾದ ಬಾಹ್ಯಾಕಾಶ ಯೋಜನೆಗಳು ಮತ್ತು ಅಧ್ಯಕ್ಷ ಟ್ರಂಪ್‌ರ ವಲಸೆ ನೀತಿಗೆ ಸಂಬಂಧಿಸಿದ ಕಾರ್ಯಗಳು ಮುಂದುವರಿಯಲಿವೆ.

ಅಗತ್ಯವಲ್ಲದ ಎಂದು ಪರಿಗಣಿಸಲಾದ ಸುಮಾರು 7.50 ಲಕ್ಷ ನೌಕರರನ್ನು ವೇತನರಹಿತ ಕಡ್ಡಾಯ ರಜೆ ಮೇಲೆ ಕಳಿಸಲಾಗುತ್ತದೆ. ಶಿಕ್ಷಣ ಇಲಾಖೆಯ ಶೇ. 90ರಷ್ಟು ಸಿಬ್ಬಂದಿ ರಜೆಯಲ್ಲಿರುತ್ತಾರೆ. ರಾಷ್ಟ್ರೀಯ ಉದ್ಯಾನವನಗಳು, ವಸ್ತುಸಂಗ್ರಹಾಲಯಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ.

ಸಣ್ಣ ಉದ್ಯಮಗಳಿಗೆ ನೀಡುವ ಸಾಲ ಸ್ಥಗಿತಗೊಳ್ಳಲಿದೆ. ಆಹಾರ ನೆರವು ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನ ವಿತರಣೆ, ಮತ್ತು ಆಹಾರ ತಪಾಸಣಾ ಕಾರ್ಯಗಳಿಗೆ ಅಡ್ಡಿಯಾಗಲಿದೆ. ದೇಶದ ಆರ್ಥಿಕತೆಯ ಪ್ರಮುಖ ಸೂಚಕವಾದ ಕಾರ್ಮಿಕ ಇಲಾಖೆಯ ಮಾಸಿಕ ನಿರುದ್ಯೋಗ ವರದಿ ಕೂಡ ಪ್ರಕಟವಾಗುವುದಿಲ್ಲ.

ಇದನ್ನೂ ಓದಿ : ‘ಕಾಂತಾರ : ಅಧ್ಯಾಯ 1’ ರಿಲೀಸ್ ಬೆನ್ನಲ್ಲೇ ಸೀಕ್ವೆಲ್ ಹೇಳಲು ರಿಷಬ್ ರೆಡಿ – ಕ್ಲೈಮ್ಯಾಕ್ಸ್​ನಲ್ಲಿ ‘ಕಾಂತಾರ: ಚಾಪ್ಟರ್ 2’ ಬಗ್ಗೆ ಘೋಷಣೆ!

Btv Kannada
Author: Btv Kannada

Read More