ಬೆಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸಲು ಎಸ್ಐಟಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಶೀಘ್ರದಲ್ಲಿ ಇಡೀ ತನಿಖೆಯನ್ನು ಮುಗಿಸಬೇಕು ಅಂತ ಎಸ್ಐಟಿಗೆ ತಿಳಿಸಿದ್ದೇವೆ. ಷಡ್ಯಂತ್ರ ಮಾಡಿದ ಆರೋಪ ಎದುರಿಸುವವರ ಬಂಧನಕ್ಕೆ ಕಾನೂನು ತೊಡಕುಗಳು ಏನೇನಿದೆಯೋ ಅದರ ಬಗ್ಗೆ ನಾನು ಇನ್ನೂ ಚರ್ಚೆ ಮಾಡಿಲ್ಲ. FSL ವರದಿ ಇನ್ನೂ ಬಂದಿಲ್ಲ. ಆದರೆ SIT ತಂಡ ಅವರ ಕೆಲಸ ಮಾಡ್ತಿದ್ದಾರೆ ಎಂದರು.

ಇತ್ತೀಚಿನ ಸಾಕ್ಷ್ಯಗಳನ್ನು FSLಗೆ ಕಳಿಸಲಾಗಿದೆ, ಎಲ್ಲವನ್ನೂ ಅಂತಿಮಗೊಳಿಸಿ ವರದಿ ಕೊಡಲು FSLಗೆ ಹೇಳಿದ್ದೇವೆ. ಆದಷ್ಟು ಶೀಘ್ರದಲ್ಲಿ ಇಡೀ ತನಿಖೆಯನ್ನು ಮುಗಿಸಬೇಕು ಅಂತ FSLಗೆ ತಿಳಿಸಿದ್ದೇವೆ. ಬಂದವರೆಲ್ಲ ದೂರು ಕೊಡೋದು ಅರ್ಜಿ ಕೊಡೋದು ಆಗ್ತಿದೆ. ಅಲ್ಲದೆ ಹೇಳಿಕೆಗಳನ್ನು ಕೊಡಲಾಗ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಲು ಹೇಳಿದ್ದೇವೆ ಎಂದು ಡಾ. ಜಿ ಪರಮೇಶ್ವರ್ ತಿಳಿಸಿದರು.
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣ ಸಂಬಂಧ ಮಾತನಾಡಿ, ನಾವು ಏನೇ ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಗಡೀಪಾರು ವಿಚಾರವನ್ನು ಅವರು ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ, ಅದೇನಾಗುತ್ತೆ ಅಂತ ನೋಡೋಣ. ಆದರೆ ತಿಮರೋಡಿ ಬಂಧಿಸೋದಾಗಲೀ, ಅಥವಾ ಕಾನೂನು ಕ್ರಮವಾಗಿ ಕೈಗೊಳ್ಳೋದಾಗಲೀ ಕಾನೂನು ಪ್ರಕಾರವೇ ಮಾಡ್ತಾರೆ. ಇದರ ಬಗ್ಗೆ ಸರ್ಕಾರ ಎಸ್ಐಟಿಗೆ ಸೂಚನೆ ಕೊಡಕ್ಕಾಗಲ್ಲ. ಅಂತಿಮವಾಗಿ ಎಸ್ಐಟಿನವ್ರು ತೀರ್ಮಾನ ಮಾಡ್ತಾರೆ. ನಾವು ಎಸ್ಐಟಿಗೆ ನಾಳೆಯೇ ತನಿಖೆ ಮುಗಿಸಿ ಅಂತ ಹೇಳಕ್ಕಾಗಲ್ಲ. ಎಲ್ಲವನ್ನೂ ನೋಡಿಕೊಂಡು ಎಸ್ಐಟಿನವ್ರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಇದೇ ವೇಳೆ ಪೊಲೀಸ್ ನೇಮಕಾತಿ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಇಂಟರ್ನಲ್ ರಿಸರ್ವೇಶನ್ ಮಾಡುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕವಾಗಿ ನಿಂತಿತ್ತು. ನೇಮಕಾತಿ ವಿಳಂಬದಿಂದ ಹಲವರು ವಯಸ್ಸು ಮೀರಿದರು, ಅವರಿಗೆ ಅನುಕೂಲ ಕಲ್ಪಿಸಬೇಕೇಂದು ಸರ್ಕಾರ ನಿರ್ಧಾರ ಮಾಡಿದೆ. 3 ವರ್ಷಗಳ ವಯೋಮಿತಿ ವಿನಾಯಿತಿ ನೀಡಿರುವುದು ಕೇವಲ ಒಮ್ಮೆ ಮಾತ್ರ. ಸಾಮಾನ್ಯ ನೇಮಕಾತಿ ನಿಯಮದಿಂದ ಬೇರೆ ರೀತಿಯ ತಿದ್ದುಪಡಿ ಅಗತ್ಯ. ಕಾನ್ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಸ್ಪಷ್ಟ ನಿಯಮ ರೂಪಿಸಲು CNDR ಕಾಯ್ದೆಯಲ್ಲಿ ಬದಲಾವಣೆಯಾಗಲಿದೆ. ಕೆಲವೆಡೆ 27, ಕೆಲವೆಡೆ 30, ಇನ್ನೂ ಕೆಲವು ಕಡೆ 33 ವರ್ಷ ವಯೋಮಿತಿ ಇದೆ, ಅದನ್ನು ಅಧ್ಯಯನ ಮಾಡಲಾಗುತ್ತಿದೆ. ಬೇರೆ ರಾಜ್ಯಗಳ ಮಾನದಂಡಗಳನ್ನು ಹೋಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ತೀವಿ, ಒಂದು ವಾರದೊಳಗೆ ನಿರ್ಧಾರ CNDR ತಿದ್ದುಪಡಿ ಕುರಿತ ಚರ್ಚೆ ಅಂತಿಮ ಹಂತದಲ್ಲಿದೆ, ಪೊಲೀಸ್ ನೇಮಕಾತಿ ವಿಚಾರದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಂ.ಎಸ್ ಆತ್ಮಾನಂದ ನೇಮಕ!







