ದುಬೈ : ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ ಸೂಪರ್-4 ಹಂತದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಅಖಾಡದಲ್ಲಿ ಅಭಿಷೇಕ್ ಶರ್ಮಾ, ಶುಭಮನ್ ಗಿಲ್ ಶತಕದ ಜೊತೆಯಾಟ, ಕೊನೆಯಲ್ಲಿ ತಿಲಕ್ ವರ್ಮಾ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಬದ್ಧ ವೈರಿ ಪಾಕ್ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಗೆಲುವಿಗೆ 172 ರನ್‌ಗಳ ಗುರಿ ಪಡೆದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಜಯ ಗಳಿಸಿದೆ.

172 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಅಮೋಘ ಆರಂಭ ಪಡೆದುಕೊಂಡಿತು. ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಇಬ್ಬರು ಮೊದಲ 10 ಓವರ್‌ಗಳಲ್ಲಿ ಪಾಕಿಸ್ತಾನ ಬೌಲರ್ಗಳನ್ನ ಧೂಳೀಪಟ ಮಾಡಿದರು. ಈ ಇಬ್ಬರು 59 ಎಸೆತಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿದರು. ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 72 ರನ್ ಸಿಡಿಸಿದರೆ, ಅವರ ಆರಂಭಿಕ ಜೊತೆಗಾರ ಶುಭ್ಮನ್ ಗಿಲ್ 47 ರನ್ಗಳಿಸಿ ಭಾರತಕ್ಕೆ ಸುಲಭ ಗೆಲುವು ಸಿಗಲು ನೆರವಾದರು.

ನಾಯಕ ಸೂರ್ಯಕುಮಾರ್ ಯಾದವ್ 3 ಎಸೆತಗಳನ್ನಾಡಿ ಖಾತೆ ತೆರೆಯದೇ ಕ್ಯಾಚ್ ನೀಡಿ ನಿರ್ಗಮಿಸಿದರು. ಸೂರ್ಯ ಔಟ್ ಆದ 17 ರನ್‌ಗಳ ಅಂತರದಲ್ಲಿ ಅಭಿಷೇಕ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಬಳಿಕ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ 26 ಎಸೆತಗಳನ್ನಾಡಿ ಕೇವಲ 25 ರನ್ಗಳಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ 5ನೇ ವಿಕೆಟ್ಗೆ ಜೊತೆಯಾಟದಲ್ಲಿ 26 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದನ್ನೂ ಓದಿ : ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಿಕ್ಔಟ್!







