ಬೆಂಗಳೂರು : ಸರ್ಕಾರಿ ಅಧಿಕಾರಿಗಳೇ ನಡೆಸಿದ ರಾಜ್ಯದ ಅತೀ ದೊಡ್ಡ ಭೂ ಹಗರಣ ಬಟಾ ಬಯಲಾಗಿದೆ. ಕಂದಾಯ ಇಲಾಖೆಯ 11 ಭ್ರಷ್ಟ ಅಧಿಕಾರಿಗಳ ವಿರುದ್ದ ನೂರಾರು ಕೋಟಿ ಮೌಲ್ಯದ ಭೂ ಹಗರಣ ಆರೋಪ ಕೇಳಿಬಂದಿದೆ. ಬೆಂಗಳೂರು ಏರ್ಪೋರ್ಟ್ ಬಳಿಯ ಚಿನ್ನದಂತ ಭೂಮಿಗೆ ಭ್ರಷ್ಟ ಕಂದಾಯ ಅಧಿಕಾರಿಗಳು ಕನ್ನ ಹಾಕಿದ್ದಲ್ಲದೇ, ಭೂ ಮಾಫಿಯಾ ಜೊತೆ ಶಾಮೀಲಾಗಿದ್ದಾರೆ. ಕೋಟಿ ಕೋಟಿ ಮೌಲ್ಯದ ಸರ್ಕಾರಿ ಜಮೀನು ಅಕ್ರಮ ಮಾರಾಟದಲ್ಲಿ ಈ ಅಧಿಕಾರಿಗಳದ್ದೇ ಕೈವಾಡ ಇರುವುದು ಬಯಲಾಗಿದೆ.

ಹೌದು.. ಕಂದಾಯ ಇಲಾಖೆಯ 11 ಭ್ರಷ್ಟ ಅಧಿಕಾರಿಗಳು ಯಲಹಂಕ ಬಳಿಯ 33 ಎಕರೆ 32 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಭೂ ಮಾಫಿಯಾಕ್ಕೆ ಮಾರಿದ್ದಾರೆ. ಭೂ ಮಾಫಿಯಾದ 13 ಜನರೊಂದಿಗೆ 11 ಸರ್ಕಾರಿ ಅಧಿಕಾರಿಗಳ ಭೂ ಕಳ್ಳಾಟವಾಡಿದ್ದು, ಏರ್ ಪೋರ್ಟ್, ಎಸ್ಇಝಡ್ ಬಳಿಯ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸೇಲ್ ಮಾಡಿದ್ದಾರೆ.

ಏರ್ಪೋರ್ಟ್ ಬಳಿಯ ಸಿಂಗಹಳ್ಳಿ ಸರ್ಕಾರಿ ಕೆರೆ ಜಮೀನು ಸರ್ವೆ ನಂ-9ರಲ್ಲಿ 11 ಎಕರೆ 37 ಗುಂಟೆ, ಸರ್ವೇ ನಂಬರ್ 10ರಲ್ಲಿ 12 ಎಕರೆ 35 ಗುಂಟೆ, ಸರ್ವೇ ನಂಬರ್ 11 ರಲ್ಲಿ 9 ಎಕರೆ 02 ಗುಂಟೆ ಹೀಗೆ ಸಾವಿರಾರು ಕೋಟಿ ಮೌಲ್ಯದ ಸರ್ಕಾರಿ ಕೆರೆ ಜಾಗ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಹೀಗಾಗಿ ನಕಲಿ ನೋಂದಣಿ ಕ್ರಯ ಮಾಡಿಸಿದ ಭಾನು, ತಜಮುಲ್ ಪಾಷಾ, ಅಲೀಂ ಪಾಷಾ, ಸಲೀಂಮುಲ್ಲಾ, ರೇಷ್ಮಾ ಅವರನ್ನು ಕೂಡಲೇ ಬಂಧಿಸಬೇಕು, ಹಾಗೆಯೇ ಭೂ ಹಗರಣದ ಭೂಮಿಯನ್ನು ಖರೀದಿಸಿದ ದೇವರಾಜ್, ವಾಸುದೇವ ರೆಡ್ಡಿ, ವೇಣುಗೋಪಾಲ್, ಆರ್.ಭರತ್ ರಾಜ್ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ಸಿಂಗನಹಳ್ಳಿ ಗ್ರಾಮಸ್ಥರು ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ದೂರು ನೀಡಿದ್ದಾರೆ.

ಖರೀದಿದಾರರ ಹೆಸರಿನಲ್ಲಿ ಸರ್ಕಾರಿ ಜಮೀನು ಭೂ ಮಾಫಿಯಾ ಪಾಲಾಗಿದ್ದು, ನಕಲಿ ದಾಖಲೆಗಳ ಮಾರಾಟಕ್ಕೆ ಕಿಶೋರ್ ರೆಡ್ಡಿ, ಪ್ರಸನ್ನ, ರಾಜೇಂದ್ರ, ಅರುಣ್ ಕುಮಾರ್ ಎಂಬವರು ಸಹಿ ಹಾಕಿದ್ದಾರೆ. ಹೀಗಾಗಿ ಸರ್ಕಾರಿ ಜಮೀನು ಮಾರಾಟ ಮಾಡಿ, ಖರೀದಿಸಿ, ಸಾಕ್ಷಿದಾರರಾದ ಎಲ್ಲರನ್ನೂ ಅರೆಸ್ಟ್ ಮಾಡಿ ಎಂದು ಸಚಿವ ಕೃಷ್ಣಬೈರೇಗೌಡರಿಗೆ ದೂರು ನೀಡಲಾಗಿದೆ.

ಭೂಹಗರಣ ನಡೆಸಿದ ಅಧಿಕಾರಿಗಳ ವಿವರ ಇಲ್ಲಿದೆ ನೋಡಿ : ಬೆಂಗಳೂರು ನಾರ್ತ್ ಕೇಸ್ ವರ್ಕರ್ ರಾಥೋಡ್, ತಹಶೀಲ್ದಾರ್ ಶ್ರೇಯಸ್ ಜಿಎಸ್, ಬ್ಯಾಟರಾಯಣಪುರದ ಡೆಪ್ಯುಟಿ ರಿಜಿಸ್ಟ್ರಾರ್ ಕೆ.ವಿ ರವಿಕುಮಾರ್, ಯಲಹಂಕ ವಿಶೇಷ ತಹಶೀಲ್ದಾರ್ ಶಿವಕುಮಾರ್, ಗ್ರೇಡ್ 2 ತಹಶೀಲ್ದಾರ್ ಆರ್.ಸುಬ್ರಹ್ಮಣಿ, ಹೆಚ್ಚುವರಿ ಶಿರಸ್ತೇದಾರ್ ಶ್ರೀನಂದನ್ ಬಿಎನ್, AC ಆಫೀಸ್ ಮ್ಯಾನೇಜರ್ ಮಹೇಶ್, ಬಾಗಲೂರು ರೆವೆನ್ಯು ಇನ್ಸ್ ಪೆಕ್ಟರ್ ಸಂದೀಪ್ ಸಿಂಗ್, SDA ಅಂಜನ್ ಮೂರ್ತಿ, ಬಾಗಲೂರು ಗ್ರಾಮಾಧಿಕಾರಿ ಭರತ್ ಕುಮಾರ್ ಸಿ, ಸಿಂಗನಹಳ್ಳಿ ಗ್ರಾಮಾಧಿಕಾರಿ ಶ್ರೀನಿವಾಸ್ ಜಿಎಂ.

ಇವರೆಲ್ಲರ ವಿರುದ್ದ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಸಿಂಗನಹಳ್ಳಿ ಗ್ರಾಮಸ್ಥರು ದೂರು ನೀಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ಹೆಸರಿನ ಸಹಿತ ಗ್ರಾಮಸ್ಥರಿಂದ ಅಧಿಕೃತ ದೂರು ದಾಖಲಾಗಿದ್ದು, ಕೂಡಲೇ ಈ ಭ್ರಷ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ, ಭೂ ಅಕ್ರಮದಲ್ಲಿ ಭಾಗಿಯಾದ ರಿಯಲ್ ಎಸ್ಟೇಟ್ ಕುಳಗಳನ್ನೂ ಜೈಲಿಗಟ್ಟಿ ಎಂದು ಆಗ್ರಹಿಸಿದ್ದಾರೆ.





ಇದನ್ನೂ ಓದಿ : ಕ್ಯಾಸೆಟ್ನಲ್ಲಿ ಹಾಡು ಬಿಡುಗಡೆ ಮಾಡಿದ ‘ಫುಲ್ ಮೀಲ್ಸ್’ ಚಿತ್ರತಂಡ!







