ಹಾಸನ : ಗಣಪತಿ ವಿಸರ್ಜನೆ ವೇಳೆ ಹಾಸದಲ್ಲಿ ಘನಘೋರ ದುರಂತ ನಡೆದು ಹೋಗಿದೆ. ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅದ್ಧೂರಿ ಗಣೇಶ ಮೆರವಣಿಗೆ ಸಾವಿನ ಮೆರವಣಿಗೆಯಾಗಿ ಬದಲಾಗಿದೆ. ಡಿಜೆ ಸೌಂಡ್ನಲ್ಲಿ ಸಖತ್ ಸ್ಟೆಪ್ ಹಾಕುತ್ತಿದ್ದವರ ಮೇಲೆ ಯಮಸ್ವರೂಪಿಯಾಗಿ ಬಂದ ಟ್ರಕ್ 9 ಜನರನ್ನ ಬಲಿ ಪಡೆದಿದೆ.
ಇದೀಗ ಹಾಸನ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಕರ್ನಾಟಕದ ಹಾಸನದಲ್ಲಿ ನಡೆದ ಅಪಘಾತವು ಹೃದಯ ವಿದ್ರಾವಕವಾಗಿದೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ. ಮೃತರ ಪ್ರತಿ ಸಂಬಂಧಿಕರಿಗೆ PMNRFನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.

ದುರಂತಕ್ಕೆ ಬೈಕ್ ಸವಾರ ಬೇಕಾಬಿಟ್ಟಿ ಅಡ್ಡ ಬಂದಿದ್ದು ಹಾಗೂ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಸಿಟ್ಟಿಗೆದ್ದ ಸ್ಥಳೀಯರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಪಘಾತ ಮಾಡಿದ ವಾಹನ ಮಹಾರಾಷ್ಟ್ರ ನೋಂದಣಿ ಹೊಂದಿದ್ದು, ಚಾಲಕ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಭುವನೇಶ್ ಕೂಡ ಗಾಯಗೊಂಡಿದ್ದಾನೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಲಾರಿ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ : ಹಿಂಸಾಪೀಡಿತ ಮಣಿಪುರ ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಮೊದಲ ಭೇಟಿ – 8,500 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ!







