ಹಿಂಸಾಪೀಡಿತ ಮಣಿಪುರ ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಮೊದಲ ಭೇಟಿ – 8,500 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ!

ಇಂಫಾಲ್‌ : ಕಳೆದ 2 ವರ್ಷಗಳಿಗೂ ಮೀರಿ ಹೊತ್ತಿ ಉರಿದಿದ್ದ ಮಣಿಪುರ ಈಗ ಶಾಂತಿ ಹೆಜ್ಜೆಯಿಡುತ್ತಿದೆ. 2 ವರ್ಷಗಳಿಂದ ಮೈತೇಯಿ ಜನರಿಗೆ ನಿರ್ಬಂಧಿಸಿದ್ದ ಹೆದ್ದಾರಿಗಳನ್ನು ತೆರೆಯಲು ಕುಕಿ ಬುಡಕಟ್ಟು ಸಮುದಾಯ ಒಪ್ಪಿಗೆ ನೀಡಿದ ಬಳಿಕ ಈ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.

2023ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಮಿಜೋರಾಂನ ಐಜ್ವಾಲ್​​ನಿಂದ ಮಧ್ಯಾಹ್ನ 12:30ರ ಸುಮಾರಿಗೆ ಚುರಾಚಂದ್‌ಪುರಕ್ಕೆ ಬಂದಿಳಿಯಲಿದ್ದಾರೆ. ಸಿಎಂ ಹುದ್ದೆಗೆ ಬಿರೇನ್‌ ಸಿಂಗ್‌ ರಾಜೀನಾಮೆ ಬಳಿಕ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿರುವ ಮಣಿಪುರಕ್ಕೆ ಇಂದಿನ ಭೇಟಿ ಮಹತ್ವದ್ದಾಗಿದೆ. ಚುರಾಚಂದ್‌ಪುರ ಮತ್ತು ಇಂಫಾಲ್‌ನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳೊಂದಿಗೆ ಮೋದಿ ಸಂವಹನ ನಡೆಸಲಿದ್ದಾರೆ. ಬಳಿಕ ಎರಡೂ ಸ್ಥಳಗಳಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸೂಕ್ತ ಭದ್ರತೆ ನಿಯೋಜಿಸಲಾಗಿದೆ.

ಇನ್ನೂ ಕುಕಿಗಳು ಬಹುಸಂಖ್ಯಾತರಾಗಿರುವ ಚುರಾಚಂದ್‌ಪುರದ ಪೀಸ್ ಗ್ರೌಂಡ್‌ನಲ್ಲಿ 7,300 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಇವತ್ತು ಅಡಿಪಾಯ ಹಾಕಲಿದ್ದಾರೆ. ಇದಾದ ಮೇಲೆ ಮೈಥೇಯಿ ಬಹುಸಂಖ್ಯಾತ ಜನರು ಇರುವ ಇಂಫಾಲ್‌ನಲ್ಲಿ ಒಟ್ಟು 1,200 ಕೋಟಿ ರೂಪಾಯಿಗಳ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಒಟ್ಟು  8,500 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಇಂದು ಮೋದಿ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ : ಉಡುಪಿಯಲ್ಲಿ ಯುವತಿಯ ಬರ್ತ್​ಡೇ ದಿನವೇ ಬರ್ಬರ ಹತ್ಯೆ.. ನಂಬರ್ ಬ್ಲಾಕ್ ಮಾಡಿದ್ದಕ್ಕೆ ಕೊಂದೇ ಬಿಟ್ಟ ಪಾಗಲ್ ಪ್ರೇಮಿ!

Btv Kannada
Author: Btv Kannada

Read More