ಉಡುಪಿ : ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಪ್ರಿಯತಮೆಯ ಬರ್ತ್ಡೇ ದಿನವೇ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಡಲ ನಗರಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೊಕ್ಕರ್ಣೆ ಬಳಿ ನಡೆದಿದೆ. ರಕ್ಷಿತಾ ಪೂಜಾರಿ (24) ಮೃತ ದುರ್ದೈವಿ. ಕಾರ್ತಿಕ್ ಕೊಲೆ ಆರೋಪಿ.

ಬ್ರಹ್ಮಾವರದ ಕೊಕ್ಕರ್ಣೆ ಬಳಿ ಈ ಘಟನೆ ನಡೆದಿದ್ದು, ಇವರಿಬ್ಬರ ಮದುವೆಗೆ ಯುವತಿಯ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಯುವತಿ ಆತನ ನಂಬರ್‌ನ್ನು ಬ್ಲಾಕ್ ಮಾಡಿದ್ದಳು. ಇದರಿಂದ ಕೋಪಗೊಂಡ ಕಾರ್ತಿಕ್, ಆಕೆ ನಿನ್ನೆ ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗುವಾಗ ಹಿಂಬಾಲಿಸಿ ಕತ್ತು ಹಾಗೂ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಇನ್ನೂ ಚಾಕು ಇರಿದ ಬಳಿಕ ಕಾರ್ತಿಕ್ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಕಾರ್ತಿಕ್‌ಗಾಗಿ ಶೋಧ ನಡೆಸುತ್ತಿದ್ದ ವೇಳೆ ಬಾವಿಯಲ್ಲಿ ಆತನ ಶವವಾಗಿ ಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ‘ಮರಳಿ ಮನಸಾಗಿದೆ’ ಚಿತ್ರದ ನಾಲ್ಕನೇ ಹಾಡು ಬಿಡುಗಡೆಗೊಳಿಸಿದ ನಟಿ ಪ್ರೇಮಾ!







