ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಂದು ಭ್ರಷ್ಟಾಚಾರ – KSDLನಲ್ಲಿ 1 ಸಾವಿರ ಕೋಟಿ ಹಗರಣ ಬಿಚ್ಚಿಟ್ಟ JDS ಶಾಸಕ HT ಮಂಜು!

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತ್ತೊಂದು ಬೃಹತ್ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಪ್ರತಿಷ್ಠಿತ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ದಲ್ಲಿ ಬರೋಬ್ಬರಿ ₹1,000 ಕೋಟಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಜೆಡಿಎಸ್ ಪಕ್ಷ ಗಂಭೀರ ಆರೋಪ ಮಾಡಿದೆ. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಹೆಚ್.ಟಿ. ಮಂಜು ಮತ್ತು ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಈ ಹಗರಣದ ಕುರಿತು ವಿವರ ನೀಡಿದರು. KSDLನಲ್ಲಿ ಸಾಬೂನು ಮತ್ತು ಮಾರ್ಜಕಗಳ ತಯಾರಿಕೆಗೆ ಬಳಸುವ ಕಚ್ಚಾ ತೈಲ ಸರಬರಾಜು ಟೆಂಡರ್‌ನಲ್ಲಿ ದೊಡ್ಡ ಮಟ್ಟದ ಲೂಟಿ ನಡೆದಿದೆ ಎಂದು ಆರೋಪಿಸಲಾಗಿದೆ.

ಇತರೆ ಕಂಪನಿಗಳಿಗೆ ಅವಕಾಶ ನೀಡದೆ, ಕೇವಲ ಕರ್ನಾಟಕ ಅರೋಮರ್ (Karnataka Aromas) ಎಂಬ ಒಂದೇ ಕಂಪನಿಗೆ ಟೆಂಡರ್ ನೀಡಲಾಗಿದೆ. ಈ ಕರ್ನಾಟಕ ಅರೋಮರ್ ಕಂಪನಿಯು 2019ರಲ್ಲೇ ಬ್ಲಾಕ್ ಲಿಸ್ಟ್‌ನಲ್ಲಿ ಇತ್ತು. ಆದರೂ ಅಂತಹ ಕಂಪನಿಗೆ ಕಚ್ಚಾ ತೈಲದ ಟೆಂಡರ್ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. KSDL ಅಧಿಕಾರಿಗಳು ಸ್ಯಾಂಡಲ್ ಆಯಿಲ್‌ ಅನ್ನು ಮಾರುಕಟ್ಟೆ ದರಕ್ಕಿಂತ ಅತಿಯಾದ ಬೆಲೆಗೆ ಖರೀದಿ ಮಾಡಿದ್ದಾರೆ. ಶಾಸಕ ಹೆಚ್.ಟಿ. ಮಂಜು ಅವರ ಪ್ರಕಾರ, 2022 ಮತ್ತು 2023ರಲ್ಲಿ ಒಂದು ಕೆ.ಜಿ ಸ್ಯಾಂಡಲ್ ಆಯಿಲ್​ಗೆ ₹2,24,655 ರೂಪಾಯಿ ದರದಲ್ಲಿ ಖರೀದಿ ಮಾಡಲಾಗಿದೆ. ಅವರು ಈ ಕುರಿತು ಪತ್ರ ಬರೆದ ನಂತರ, 2025ರಲ್ಲಿ ಇದೇ ಸ್ಯಾಂಡಲ್ ಆಯಿಲ್ ಬೆಲೆಯನ್ನು ₹93,116 ಗೆ ನಿಗದಿಪಡಿಸಲಾಗಿದೆ. ಇದರಿಂದ, ಪ್ರತಿ ಕೆ.ಜಿ.ಗೆ ಸುಮಾರು ₹1.2 ಲಕ್ಷ ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಈಗ ಖರೀದಿ ಮಾಡಲಾಗುತ್ತಿದೆ. ಈವರೆಗೂ 11,000 ಕೆ.ಜಿ ಸ್ಯಾಂಡಲ್‌ವುಡ್ ಆಯಿಲ್ ಅನ್ನು ಹೆಚ್ಚಿನ ದರಕ್ಕೆ ಖರೀದಿಸಿದ್ದರಿಂದ KSDL ಗೆ ಸುಮಾರು ₹132 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಹೆಚ್.ಟಿ. ಮಂಜು ಅವರು ಹೇಳಿದ್ದಾರೆ.

ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಮೈಸೂರು ಸ್ಯಾಂಡಲ್‌ನಂಥ ಪ್ರತಿಷ್ಠಿತ ಕಂಪನಿಯಲ್ಲಿ ಪದೇ ಪದೇ ಭ್ರಷ್ಟಾಚಾರ ನಡೆಯುತ್ತಿರುವುದು ರಾಜ್ಯಕ್ಕೆ ಮತ್ತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟುಮಾಡುತ್ತಿದೆ. ತಮಗೆ ಬೇಕಾದವರಿಗೆ ಟೆಂಡರ್ ನೀಡುವ ವ್ಯವಸ್ಥೆ ಸೃಷ್ಟಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮಾಜಿ ಶಾಸಕ ವೈ.ಎಸ್.ವಿ. ದತ್ತ. ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ಬೃಹತ್ ಹಗರಣದ ಕುರಿತು ಕೂಲಂಕಷ ತನಿಖೆ ನಡೆಸಬೇಕು ಎಂದು ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಡಿಸೆಂಬರ್ 15 ರಂದು ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ಟ್ರೇಲರ್ ಬಿಡುಗಡೆ!

Btv Kannada
Author: Btv Kannada

Read More