ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದು ಮತ್ತು ಜೈಲಿನೊಳಗೆ ಮೂಲಭೂತ ಸೌಲಭ್ಯಗಳನ್ನು ಕೋರಿ ದರ್ಶನ್ ಸ್ವತಃ ಸಲ್ಲಿಸಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸಿಸಿಎಚ್ 57ನೇ ಕೋರ್ಟ್ ಇಂದು ಪ್ರಕಟಿಸಲಿದೆ.
ಈ ಹಿಂದೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಬಳ್ಳಾರಿ ಬೆಂಗಳೂರಿನಿಂದ ಸುಮಾರು 310 ಕಿ.ಮೀ ದೂರದಲ್ಲಿದೆ. ಇದರಿಂದಾಗಿ ನಟ ಪ್ರತಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದು ಕಷ್ಟವಾಗುತ್ತದೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ, ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಸುಪ್ರೀಂ ಕೋರ್ಟ್ ಈಗಾಗಲೇ ದರ್ಶನ್ ಅವರ ಜಾಮೀನು ರದ್ದುಗೊಳಿಸುವಾಗ ಜೈಲಿನಲ್ಲಿ ಅವರ ನಡವಳಿಕೆಯನ್ನು ಗಮನಿಸಿದೆ. ಆದ್ದರಿಂದ ಅವರ ವರ್ಗಾವಣೆಗೆ ಯಾವುದೇ ಹೆಚ್ಚುವರಿ ಸಮರ್ಥನೆಯ ಅಗತ್ಯವಿಲ್ಲ, ಆರೋಪಿಯನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಆಡಳಿತಾತ್ಮಕ ಕಾರಣಗಳು ಮಾತ್ರ ಸಾಕು ಎಂದು ಪ್ರತಿ ವಾದ ಮಂಡಿಸಿದ್ದರು.
ಒಂದ್ವೇಳೆ ಇಂದು ದರ್ಶನ್ರನ್ನು ಬಳ್ಳಾರಿ ಜೈಲಿಗೆ ಶಿಫ್ಟಿಂಗ್ಗೆ ಕೋರ್ಟ್ ಒಪ್ಪಿಗೆ ನೀಡಿದ್ರೆ, ದಾಸನಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ನಟ ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ರೆ, ಆರೋಪಿಗಳಾದ ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗಬೇಕು. ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಬೇಕಾಗುತ್ತದೆ. ಪವಿತ್ರಾಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಸೆರೆವಾಸ ಅನುಭವಿಸಬೇಕಾಗುತ್ತದೆ.
ಇನ್ನೂ ದರ್ಶನ್ ಪರ ವಕೀಲರು ಹಾಸಿಗೆ, ದಿಂಬು ಮತ್ತು ಕಂಬಳಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಿರ್ದೇಶನ ನೀಡುವಂತೆ ಕೋರಿದ್ದು, ವಿಚಾರಣಾಧೀನ ಕೈದಿಗಳು ಕನಿಷ್ಠ ಸೌಲಭ್ಯಗಳಿಗೆ ಅರ್ಹರು ಎಂದು ವಾದಿಸಿದ್ದರು. ಈ ಕುರಿತ ಆದೇಶವು ಇಂದೇ ಹೊರಬೀಳಲಿದೆ.
ಇದನ್ನೂ ಓದಿ : ಇಂದು ಕೂಡ ಮದ್ದೂರು ಬಂದ್ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನಾ ರ‍್ಯಾಲಿ.. ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲು!







