ರಾಜಗೀರ್ : ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಈಗಾಗಲೇ ಸೂಪರ್ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿರುವ ಆತಿಥೇಯ ಭಾರತ ತಂಡ ಮತ್ತೊಂದು ಭರ್ಜರಿ ಗೆಲುವು ದಾಖಲಿಸಿದೆ. ಸೋಮವಾರ ನಡೆದ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಕಜಾಕಸ್ತಾನ ಎದುರು ಭಾರತ ಗೋಲುಗಳ ಸುರಿಮಳೆಗೈದು 15-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ.
ಇದು ಭಾರತಕ್ಕೆ ಒಲಿದ ಹ್ಯಾಟ್ರಿಕ್ ಗೆಲುವು. ಸದ್ಯ ಭಾರತ 9 ಅಂಕಗಳೊಂದಿಗೆ ಎ ಗುಂಪಿನ ಅಗ್ರಸ್ಥಾನದಲ್ಲಿದೆ. ‘ಬಿ’ ಗುಂಪಿನಲ್ಲಿ ಮಲೇಷ್ಯಾ ಕೂಡ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಭಾರತ ಪರ ಅಭಿಷೇಕ್ ನಾಲ್ಕು ಗೋಲು ಬಾರಿಸಿದರೆ, ಸುಖ್‌ಜೀತ್ ಸಿಂಗ್ ಹ್ಯಾಟ್ರಿಕ್ ಗಳಿಸಿದರು. ಅಭಿಷೇಕ್ (5ನೇ, 8ನೇ, 20ನೇ ಮತ್ತು 59ನೇ), ಸುಖ್‌ಜೀತ್ ಸಿಂಗ್ (15ನೇ, 32ನೇ, 38ನೇ), ಜುಗ್ರಾಜ್ ಸಿಂಗ್ (24ನೇ, 31ನೇ, 47ನೇ), ನಾಯಕ ಹರ್ಮನ್‌ಪ್ರೀತ್ ಸಿಂಗ್ (26ನೇ), ಅಮಿತ್ ರೋಹಿದಾಸ್ (29ನೇ), ರಾಜಿಂದರ್ ಸಿಂಗ್ (32ನೇ), ಸಂಜಯ್ ಸಿಂಗ್ (54ನೇ) ಮತ್ತು ದಿಲ್‌ಪ್ರೀತ್ ಸಿಂಗ್ (55ನೇ) ನಿಮಿಷದಲ್ಲಿ ಗೋಲು ಗಳಿಸಿದರು.
ಇದನ್ನೂ ಓದಿ : ಬಾಗಲಕೋಟೆ : ಅನಾರೋಗ್ಯದಿಂದ ಮನನೊಂದು ಮಹಿಳೆ ಆತ್ಮಹತ್ಯೆ!







