ಕಲಬುರಗಿ : ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ ಪೂಜ್ಯ ಡಾ. ಶ್ರೀ ಶರಣಬಸಪ್ಪ ಅಪ್ಪ (92) ಅವರು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡಾ.ಶರಣಬಸಪ್ಪ ಅಪ್ಪ ಅವರು ಕಲಬುರಗಿಯ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶರಣಬಸವಪ್ಪ ಅಪ್ಪ ಆರೋಗ್ಯದ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ ಅಪ್ಪ ಅವರ ಇಚ್ಛೆಯಂತೆ ನಿನ್ನೆ ಸಂಜೆ ಆಸ್ಪತ್ರೆಯಿಂದ ದಾಸೋಹ ಮಾಹಾ ಮನೆಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಜೊತೆಗೆ ಅಪ್ಪ ಇಚ್ಛೆಯಂತೆ ಕುಟುಂಬಸ್ಥರು ಶರಣಬಸವೇಶ್ವರರ ದೇವರ ದರ್ಶನ ಮಾಡಿಸಿದ್ದರು.

ದೇವರ ದರ್ಶನ ಬಳಿಕ ದಾಸೋಹ ಮಹಾ ಮನೆಗೆ ಅಪ್ಪ ಅವರನ್ನ ಶಿಫ್ಟ್ ಮಾಡಲಾಗಿತ್ತು. ಮಾಹಾ ಮನೆಯಲ್ಲಿಯೇ ಡಾ ಅಪ್ಪಗೆ ಚಿಕಿತ್ಸೆ, ಆರೈಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅಪ್ಪ ಲಿಂಗೈಕ್ಯರಾಗಿದ್ದಾರೆ. 92 ವರ್ಷದ ಡಾ.ಅಪ್ಪ ವಯೋಸಹಜ ಕಾಯಿಲೆ ಹಾಗೂ ನಿಮೋನಿಯಾದಿಂದ ಬಳಲುತ್ತಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಸುಧಾರಣೆ ಆಗಿರಲಿಲ್ಲ. ಇದೀಗ ಡಾ. ಶ್ರೀ ಶರಣಬಸಪ್ಪ ಅಪ್ಪ ಅವರು ಪತ್ನಿ, ನಾಲ್ವರು ಪುತ್ರಿ ಮತ್ತು ಓರ್ವ ಪುತ್ರ ಹಾಗೂ ಲಕ್ಷಾಂತರ ಭಕ್ತರನ್ನು ಅಗಲಿದ್ದಾರೆ.
ಸಮಾಜ ಸೇವೆ : ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಬೆಳವಣಿಗೆಗೆ ಶರಣಬಸಪ್ಪ ಅಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಶರಣಬಸವೇಶ್ವರ ವಿಶ್ವವಿದ್ಯಾಲಯ ಸೇರಿದಂತೆ 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶರಣಬಸವೇಶ್ವರ ಸಂಸ್ಥಾನವು ದಾಸೋಹಕ್ಕೆ ಹೆಸರುವಾಸಿಯಾಗಿದ್ದು, ಡಾ. ಅಪ್ಪ ಅವರು ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹವನ್ನೂ ಮುಂದುವರೆಸಿಕೊಂಡು ಬಂದಿದ್ದರು. ಲಕ್ಷಾಂತರ ಜನರಿಗೆ ಅನ್ನ-ಅಕ್ಷರ ನೀಡಿದ್ದ ಸಂತ ಡಾ. ಶ್ರೀ ಶರಣಬಸಪ್ಪ ಅವರು 1988ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಇದನ್ನೂ ಓದಿ : ಪರಪ್ಪನ ಅಗ್ರಹಾರಕ್ಕೆ ನಟ ದರ್ಶನ್ ಶಿಫ್ಟ್ – ಮತ್ತೆ ಸೆಂಟ್ರಲ್ ಜೈಲು ಸೇರಿದ ‘ಡಿ’ ಗ್ಯಾಂಗ್!







