7 ದಿನ, 170 ಗಂಟೆ ನಿರಂತರ ಭರತನಾಟ್ಯ.. ವಿಶ್ವ ದಾಖಲೆ ಬರೆದ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ!

ಮಂಗಳೂರು : 7 ದಿನ, ನಿರಂತರ 170 ಗಂಟೆ ಭರತನಾಟ್ಯ ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ‌ ಬಿಎ ವಿದ್ಯಾರ್ಥಿನಿ ರೆಮೋನಾ ಸಾಧನೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಯಾಗಿದೆ.

ಸೈಂಟ್ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್​​ನಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಸತತ ಏಳು ದಿನಗಳ ಕಾಲ ರಾತ್ರಿ ಹಗಲೆನ್ನದೆ ದಿನವಿಡೀ ರೆಮೋನಾ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ. ಸತತ 127 ಗಂಟೆ ಭರತನಾಟ್ಯ ಪ್ರದರ್ಶನ ನೀಡಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ 170 ಗಂಟೆ ಸತತ ಪ್ರದರ್ಶನ ನೀಡುವ ಮೂಲಕ ರೆಮೋನಾ ಪಿರೇರಾ ವಿಶ್ವಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರೆಮೋನಾ ಭರತನಾಟ್ಯ ಪ್ರದರ್ಶಿಸಿದ್ದಾರೆ. ಏಳು ದಿನಗಳ‌ ಪ್ರದರ್ಶನ ಕ್ಯಾಮರಾದ ಮೂಲಕ ರೆಕಾರ್ಡ್ ಮಾಡಲಾಗಿದೆ. ಅಧಿಕಾರಿಗಳು ರೆಮೋನಾ ಸಾನೆಯನ್ನು ಸಂಪೂರ್ಣವಾಗಿ ದಾಖಲೀಕರಣ ಮಾಡಿಕೊಂಡಿದ್ದಾರೆ. ರೆಮೋನಾ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು, ಸಹಪಾಠಿಗಳಿಂದಲೂ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಇದೀಗ, ರೆಮೋನಾ ಸಾಧನೆಗೆ ಸಹಪಾಠಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ನಿರಂತರ ಭರತನಾಟ್ಯ ಪ್ರದರ್ಶನ ವೇಳೆ ಹೇಗಿತ್ತು ಆಹಾರ, ವಿಶ್ರಾಂತಿ? ದಾಖಲೆ ಬರೆಯುವುದಕ್ಕಾಗಿ ಭರತನಾಟ್ಯ ಪ್ರದರ್ಶಿಸುತ್ತಿದ್ದ ಸಂದರ್ಭ ರೆಮೋನಾ ಮಿತ ಆಹಾರ ಸೇವಿಸುತ್ತಿದ್ದರು. ಪ್ರತಿ 3 ಗಂಟೆಗೊಮ್ಮೆ 15 ನಿಮಿಷದ ವಿಶ್ರಾಂತಿ ಇರುತ್ತಿತ್ತು. ಈ ವೇಳೆಯಲ್ಲಿ ಬಾಳೆಹಣ್ಣು, ಮೊಸರು, ಎಳನೀರು, ಚೆನ್ನಾಗಿ ಬೇಯಿಸಿದ ಬೆಳ್ತಿಗೆ ಅನ್ನ ಸೇವನೆ ಮಾಡಿದ್ದರು. ಇದಕ್ಕೆಂದೇ ಹಲವು ತಿಂಗಳುಗಳಿಂದ‌ ಆಹಾರ ಕ್ರಮವನ್ನು ಅಭ್ಯಾಸ ಮಾಡಿದ್ದರು.

ಇದನ್ನೂ ಓದಿ : ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಡ್ರಗ್ಸ್ ಹವಾಳಿ – ರಾತ್ರಿ ಕಾರ್ಯಾಚರಣೆಗಿಳಿದ ಕಮಿಷನರ್​​ ಸೀಮಾ ಲಾಟ್ಕರ್​​!

Btv Kannada
Author: Btv Kannada

Read More