ಅಬ್ಬಾಬ್ಬ.. ಆರ್​ಸಿಬಿ ಬ್ರ್ಯಾಂಡ್​ ಮೌಲ್ಯ ಎಷ್ಟು ಗೊತ್ತಾ?

ಬೆಂಗಳೂರು : ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ​ ಟ್ರೋಫಿ ಎತ್ತಿ ಹಿಡಿದಿದ್ದೇ ಹಿಡಿದಿದ್ದು ಐಪಿಎಲ್​ನ ಬ್ರ್ಯಾಂಡ್​ ಮೌಲ್ಯ ಹಾಗೂ ಬ್ಯುಸಿನೆಸ್​ ಭಾರೀ ಮಟ್ಟದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ 12.9 ರಷ್ಟು ಹೆಚ್ಚಳವಾಗಿದ್ದು ಬ್ರ್ಯಾಂಡ್ ಮೌಲ್ಯ ಸದ್ಯ 18.5 ಬಿಲಿಯನ್ ಯುಎಸ್ ಡಾಲರ್‌ಗಳನ್ನು ತಲುಪಿದೆ. ಅಂದರೆ 1,58,000 ಕೋಟಿ ರೂಪಾಯಿಗೂ ಅಧಿಕವಾಗಿದೆ. ಲೀಗ್‌ನ ಸ್ವತಂತ್ರ ಬ್ರ್ಯಾಂಡ್ ಮೌಲ್ಯವು 13.8% ರಿಂದ ಯುಎಸ್​ ಡಾಲರ್​ 3.9 ಶತಕೋಟಿಗೆ ಹೆಚ್ಚಾಗಿದೆ.

ಹೌಲಿಹಾನ್ ಲೋಕಿಯ 2025ರ ಐಪಿಎಲ್ ಬ್ರ್ಯಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ ವ್ಯಾಪಾರ ಮತ್ತು ಬ್ರ್ಯಾಂಡ್ ಮೌಲ್ಯಮಾಪನಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಸದ್ಯ ವಿಶ್ವದ ಅತ್ಯಮೂಲ್ಯ ಲೀಗ್​​ಗಳಲ್ಲಿ ಐಪಿಎಲ್​ ಕೂಡ ಒಂದಾಗಿದ್ದು ವರ್ಷದಿಂದ ವರ್ಷಕ್ಕೆ ದೊಡ್ಡಮಟ್ಟದಲ್ಲೇ ಬ್ರ್ಯಾಂಡ್​ ಮೌಲ್ಯ ಹಾಗೂ ಬ್ಯುಸಿನೆಸ್​ನಲ್ಲಿ ತನ್ನದೇ ಗುರುತು ಮೂಡಿಸುತ್ತಿದೆ. ಕ್ರಿಕೆಟ್ ಜಗತ್ತಿನಲ್ಲಿ ಐಪಿಎಲ್‌ನ ಪ್ರಾಬಲ್ಯವು ಅಖಂಡವಾಗಿದ್ದು ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಇನ್ನು ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿರುವ ಆರ್​ಸಿಬಿಯೂ ಚೆನ್ನೈ ತಂಡವನ್ನು ತಳ್ಳಿ ಅಗ್ರ ಸಿಂಹಾಸನದಲ್ಲಿ ಕುಳಿತುಕೊಂಡಿದೆ. 2024ರಲ್ಲಿ 227 ಮಿಲಿಯನ್ ಡಾಲರ್ ಇದ್ದ ಆರ್​ಸಿಬಿ ಬ್ರ್ಯಾಂಡ್​ ಮೌಲ್ಯ 2025ರಲ್ಲಿ ಐಪಿಎಲ್​ ಕಪ್​ ಎತ್ತಿ ಹಿಡಿಯುತ್ತಿದ್ದಂತೆ 269 ಮಿಲಿಯನ್ ಡಾಲರ್​ಗೆ ತಲುಪಿದೆ. ಇದರಿಂದ ಚೆನ್ನೈ ಮೂರನೇ ಸ್ಥಾನಕ್ಕೆ ಹೋಗಿದೆ. ಮುಂಬೈ ಇಂಡಿಯನ್ಸ್​ 242 ಮಿಲಿಯನ್ ಡಾಲರ್​ನಿಂದ ಸೆಕೆಂಡ್​ ಪ್ಲೇಸ್​ನಲ್ಲಿದ್ರೆ ಚೆನ್ನೈ 235 ಮಿಲಿಯನ್ ಡಾಲರ್​ನಿಂದ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

2025ರ ಐಪಿಎಲ್​ ಟ್ರೋಫಿಯಲ್ಲಿ ರನ್ನರ್ ಅಪ್ ಟೀಮ್ ಆಗಿರುವ ಪಂಜಾಬ್ ಕಿಂಗ್ಸ್​ ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ಲಾಭ ಗಳಿಸಿರುವ ತಂಡವಾಗಿದೆ. ಫೈನಲ್​ನಲ್ಲಿ ರನ್ನರ್​ ಅಪ್​ ತಂಡ, ಆಕ್ಷನ್​​ನಲ್ಲಿ ಅಗ್ರೆಸ್ಸಿವ್​ನೆಸ್​ ಹಾಗೂ ಡಿಜಿಟಲ್​ ಪ್ರಚಾರಗಳಿಂದ ಪಂಜಾಬ್ ಕಿಂಗ್ಸ್ ಬ್ರಾಂಡ್ ಮೌಲ್ಯದಲ್ಲಿ ಶೇಕಡಾ 39.6 ರಷ್ಟು ಏರಿಕೆ ಆಗಿದ್ದರಿಂದ 141 ಮಿಲಿಯನ್‌ ಡಾಲರ್​ ತಲುಪಿದೆ.

ಇದನ್ನೂ ಓದಿ : ಇಂದು ಭಾರತ್ ಬಂದ್​.. ರಾಜ್ಯದ ಶಾಲೆ-ಕಾಲೇಜುಗಳಿಗೆ ರಜೆ ಇದ್ಯಾ? ಕಾರ್ಮಿಕ ಸಂಘಟನೆಗಳ ಡಿಮ್ಯಾಂಡ್ ಏನೇನು?

Btv Kannada
Author: Btv Kannada

Read More