ಇಂದು ಭಾರತ್ ಬಂದ್​.. ರಾಜ್ಯದ ಶಾಲೆ-ಕಾಲೇಜುಗಳಿಗೆ ರಜೆ ಇದ್ಯಾ? ಕಾರ್ಮಿಕ ಸಂಘಟನೆಗಳ ಡಿಮ್ಯಾಂಡ್ ಏನೇನು?

ದೇಶಾದ್ಯಂತ 10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು ರೈತ ಸಂಘಟನೆಗಳು ಇಂದು ‘ಭಾರತ್ ಬಂದ್‘ಗೆ ಕರೆ ನೀಡಿದೆ. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಈ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬ್ಯಾಂಕಿಂಗ್, ಸಾರಿಗೆ, ಅಂಚೆ ಸೇವೆಗಳು, ಗಣಿಗಾರಿಕೆ ಮತ್ತು ನಿರ್ಮಾಣದಂತಹ ಪ್ರಮುಖ ಕ್ಷೇತ್ರಗಳ 25 ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಗ್ರಾಮೀಣ ಕಾರ್ಮಿಕರು ಬಂದ್​ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಈ ಮುಷ್ಕರವು ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ’ ನೀತಿಗಳ ವಿರುದ್ಧ ಒಗ್ಗಟ್ಟಿನ ಪ್ರದರ್ಶನವಾಗಿದೆ. ಇಂದು ಭಾರತ್​ ಬಂದ್​ ಹಿನ್ನೆಲೆ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ತೆರೆದಿರುತ್ತಾ? ಬ್ಯಾಂಕ್, ಸರ್ಕಾರಿ ಕಚೇರಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ​

ಕರ್ನಾಟಕದಲ್ಲಿ ಶಾಲೆ-ಕಾಲೇಜಿಗಿಲ್ಲ ರಜೆ : ಕರ್ನಾಟಕ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಬೆಂಗಳೂರಿನ ಶಿಕ್ಷಣ ಸಂಸ್ಥೆಗಳು ಎಂದಿನಿಂದ ಕಾರ್ಯನಿರ್ವಹಿಸಲಿದೆ. ಆದ್ರೆ ಸಾರಿಗೆ ಸಮಸ್ಯೆಗಳು ಮತ್ತು ಸುರಕ್ಷತಾ ದೃಷ್ಟಿಯಿಂದ ಮಕ್ಕಳ ಹಾಜರಾತಿ ಕಡಿಮೆಯಾಗಬಹುದು ಎನ್ನಲಾಗ್ತಿದೆ. ಶಾಲೆಗಳು, ಕಾಲೇಜುಗಳು ಮತ್ತು ಖಾಸಗಿ ಕಚೇರಿಗಳು ತೆರೆದಿರುವ ಸಾಧ್ಯತೆಯಿದ್ದರೂ, ಸಾರಿಗೆ ಮತ್ತು ಇತರ ಸೇವೆಗಳಲ್ಲಿನ ಅಡಚಣೆಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗ್ತಿದೆ.

ಭಾರತ್ ಬಂದ್ ಕಾರಣದಿಂದಾಗಿ ರೈಲು ಸೇವೆಗಳಲ್ಲಿ ವಿಳಂಬ ಅಥವಾ ಸಂಚಾರದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿರುವ ಅನೇಕ ಐಟಿ ಕಂಪನಿಗಳು, ಸ್ಟಾರ್ಟ್ ಅಪ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳು ಪರಿಸ್ಥಿತಿ ಗಮನಿಸಿ ವರ್ಕ್​ ಫ್ರಮ್ ಹೋಮ್ ನೀಡುವ ಸಾಧ್ಯತೆ ಇದೆ. ಬಸ್ ಮತ್ತು ಆಟೋ ರಿಕ್ಷಾ ಚಾಲಕರು ಸಹ ಈ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ಜನರು ಪ್ರಯಾಣದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಕೆಲವು ಶಾಲೆಗಳು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದನ್ನು ತಮ್ಮ ಸ್ಥಳದ ಪರಿಸ್ಥಿತಿಯನ್ನು ನೋಡಿದ ನಂತರ ನಿರ್ಧರಿಸುವಂತೆ ಸಲಹೆ ನೀಡಲಾಗಿದೆ.

ಭಾರತ್ ಬಂದ್​ಗೆ ಕರೆ ಕೊಟ್ಟಿದ್ದೇಕೆ..? ಬೇಡಿಕೆಗಳೇನು? : ಟ್ರೇಡ್ ಯೂನಿಯನ್​ಗಳು ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ನಿರ್ಲಕ್ಷ್ಯ ಮಾಡಿವೆ ಎಂದು ಹೇಳಿವೆ. ಕಳೆದ ವರ್ಷವೇ ಕೇಂದ್ರದ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯಾಗೆ 17 ಪಾಯಿಂಟ್​ಗಳ ಚಾರ್ಟರ್ ಬೇಡಿಕೆಯನ್ನು ಸಲ್ಲಿಸಿದ್ದೇವು. ಇದರ ಬಗ್ಗೆ ಯಾವುದೇ ಗಂಭೀರ ಪ್ರತಿಕ್ರಿಯೆಯನ್ನು ಕೇಂದ್ರ ಸರ್ಕಾರ ನೀಡಿಲ್ಲ. ದೇಶದ ಕಲ್ಯಾಣ ರಾಜ್ಯದ ಸ್ಥಾನಮಾನವನ್ನ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಕೇಂದ್ರ ಸರ್ಕಾರ ಬರೀ ವಿದೇಶಿ, ಭಾರತೀಯ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ನೀತಿಗಳಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಟ್ರೇಡ್ ಯೂನಿಗಳು ಹೇಳಿವೆ.

  • ಕಳೆದ 10 ವರ್ಷಗಳಿಂದ ಭಾರತೀಯ ಕಾರ್ಮಿಕರ ಸಮ್ಮೇಳನವನ್ನು ಕೇಂದ್ರ ಸರ್ಕಾರ ನಡೆಸಿಲ್ಲ
  • ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್​ಗಳಿಂದ ಯೂನಿಯನ್​​ಗಳು ದುರ್ಬಲವಾಗುತ್ತವೆ. ಜೊತೆಗೆ ಕಾರ್ಮಿಕರ ಕೆಲಸದ ಅವಧಿ ಹೆಚ್ಚಳವಾಗುತ್ತೆ.
  • ಕೇಂದ್ರ ಸರ್ಕಾರವು ಗುತ್ತಿಗೆ ನೌಕರಿಯನ್ನು ಪೋತ್ಸಾಹಿಸುತ್ತಿದ್ದು, ಖಾಸಗೀಕರಣ ಮಾಡುತ್ತಿದೆ.
  • ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ನೇಮಕಾತಿ ಬೇಡಿಕೆಯನ್ನು ಕಡೆಗಣಿಸಿದೆ. ಕೂಲಿ ಹೆಚ್ಚಳ ಮಾಡಿಲ್ಲ.
  • ನಿರುದ್ಯೋಗ ಸಮಸ್ಯೆ ನಿವಾರಿಸದೆ ಉದ್ಯೋಗದಾತರಿಗೆ ಇನ್ಸೆಂಟೀವ್ ನೀಡುತ್ತಿದೆ.
  • ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗುತ್ತಿದೆ. ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ.
  • ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವೆಚ್ಚವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂದು ಟ್ರೇಡ್ ಯೂನಿಯನ್ ಗಳು ಆರೋಪಿಸಿವೆ.

ಇದನ್ನೂ ಓದಿ : ಬೆಂಗಳೂರು, ಕೋಲಾರದಲ್ಲಿ NIA ದಾಳಿ – ಪರಪ್ಪನ ಅಗ್ರಹಾರ ಜೈಲಿನ ASI ಸೇರಿ ಮೂವರು ಶಂಕಿತ ಉಗ್ರರ ಬಂಧನ!

Btv Kannada
Author: Btv Kannada

Read More