ಹಾಸನ : ದೀಪಾವಳಿ ಹಬ್ಬದ ಸಾಲು ಸಾಲು ರಜೆ ಹಿನ್ನೆಲೆ ಹಾಸನಾಂಬ ದೇವಾಲಕ್ಕೆ ಹೊರಜಿಲ್ಲೆಗಳಿಂದ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರೀ ಪ್ರಮಾಣದಲ್ಲಿ ಭಕ್ತಸಾಗರವೇ ಹರಿದುಬರುತ್ತಿದೆ. ಹೀಗಾಗಿ ಸ್ಥಳೀಯ ಪೊಲೀಸರು ಜಿಲ್ಲಾಧಿಕಾರಿಗೆ ಪತ್ರ ಬರೆದು ಕಾಲ್ತುಳಿತದ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಹೊರ ಜಿಲ್ಲೆಗಳಿಂದ ದರ್ಶನಕ್ಕೆ ಬರುವ ಭಕ್ತರನ್ನು ನಿಯಂತ್ರಿಸಬೇಕು. ವಿಶೇಷ ಬಸ್ಗಳನ್ನು ತಡೆಹಿಡಿಯಬೇಕು. ಅನಾಹುತವಾದರೆ ನಾವು ಹೊಣೆಯಲ್ಲ ಎಂದು ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ಈ ಪತ್ರ ಬರೆದಿದ್ದಾರೆ.
ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳಾವಕಾಶ ಕಡಿಮೆ ಇದೆ. ಬ್ಯಾರಿಕೇಡ್ ದಾಟಿ ಸರತಿ ಸಾಲುಗಳು ಮುಂದೆ ಹೋಗುತ್ತಿವೆ. ದೀಪಾವಳಿ ರಜೆಯಲ್ಲೂ ಭಾರಿ ಪ್ರಮಾಣದ ಭಕ್ತರು ಬಂದರೆ ನೂಕು ನುಗ್ಗಲಾಗುತ್ತದೆ. ಎಲ್ಲಾ ರೀತಿಯ ಸರತಿ ಸಾಲುಗಳಲ್ಲೂ ನೂಕು ನುಗ್ಗಲಾಗುತ್ತದೆ. ಹೀಗಾಗಿ ಕಾಲ್ತುಳಿತದ ಘಟನೆ ಜರುಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಬಸ್ ಗಳನ್ನು ನಿಯಂತ್ರಿಸಿ ಎಂದು ಪತ್ರ ಬರೆಯಲಾಗಿದೆ.
ಪತ್ರದಲ್ಲಿ ಏನಿದೆ?
ಹಾಸನ ಜಿಲ್ಲಾ ಎಸ್‌ಪಿ ಮೊಹಮ್ಮದ್ ಸುಜಿತಾ ಅವರು ಜಿಲ್ಲಾಧಿಕಾರಿಗೆ ಅ.17ರಂದು ಬರೆದ ಪತ್ರದಲ್ಲಿ, “ರಾಜ್ಯ ಹಾಗೂ ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದೇವಸ್ಥಾನದ ಬಳಿ ಸ್ಥಳಾವಕಾಶ ಕಡಿಮೆ ಇದ್ದು, ₹300 ಮತ್ತು ₹1000 ಟಿಕೆಟ್‌ಗಳ ವಿಶೇಷ ದರ್ಶನದ ಸಾಲುಗಳು ಮೂರ್ನಾಲ್ಕು ಕಿಲೋಮೀಟರ್‌ವರೆಗೂ ಬೆಳೆದು ನಗರದ ಮುಖ್ಯ ರಸ್ತೆಯನ್ನು ತಲುಪಿವೆ” ಎಂದು ವಿವರಿಸಿದ್ದಾರೆ.
ದೀಪಾವಳಿ ಹಬ್ಬದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಂತಹ ಅಹಿತಕರ ಘಟನೆಗಳು ನಡೆಯಬಹುದು. ಹಾಗಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೊರ ಜಿಲ್ಲೆಗಳಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಭಕ್ತರ ಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಎಸ್‌ಪಿ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಆಭರಣ್ ಚಿನ್ನದ ಮಳಿಗೆಗೆ ಚಾಲನೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ – ಅಶ್ವಿನಿ ಪುನೀತ್ ರಾಜ್ಕುಮಾರ್!







