ಬೆಂಗಳೂರಲ್ಲಿ ನಾಳೆ RCB-CSK ಪಂದ್ಯ – ಫ್ಯಾನ್ಸ್​ಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಸೂಚನೆ!

RCB ಪಂದ್ಯ ಅಂದ್ರೆ ಬೆಂಗಳೂರಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಅದರಲ್ಲಿಯೂ RCB ಮತ್ತು CSK ನಡುವಿನ ಪಂದ್ಯವೆಂದರೆ ಅದರ ಕ್ರೇಜ್‌ ಹೆಚ್ಚಾಗಿಯೇ ಇರುತ್ತದೆ. RCB ಮತ್ತು CSK ರಣರೋಚಕ ಪಂದ್ಯಕ್ಕೆ ಈಗಾಗಲೇ ಫ್ಯಾನ್ಸ್​ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. 

ಐಪಿಎಲ್‌ ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿಗೆ ಬರುವುದು ಬೇಡ. ಒಂದೊಮ್ಮೆ ಅದಾಗಿಯೂ ಬಂದಲ್ಲಿ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಖಡಕ್​​ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಈ ಹಿಂದೆ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆದ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಅದೇ ರೀತಿ ನಾಳಿನ ಮ್ಯಾಚ್​​ ವೇಳೆಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ನಿರ್ಧಾರಗಳನ್ನ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ.

ಕಳೆದ ಮ್ಯಾಚ್​​ ಸಂದರ್ಭ ಆಗಮನ ಮತ್ತು ನಿರ್ಗಮನ ಸೇರಿ ಸುಮಾರು 32 ಸಾವಿರ ಜನ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ನಾಳಿನ ಪಂದ್ಯಕ್ಕೂ ಆಗಮಿಸಲಿರುವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಬಸ್​​ಗಳನ್ನೇ ಬಳಸಿ ಎಂದು ಕೇಳಿಕೊಳ್ಳೋದಾಗಿ ಅವರು ಹೇಳಿದ್ದಾರೆ.

ಕಳೆದ  ಪಂದ್ಯದ ವೇಳೆ ಹಲವರ ಮೊಬೈಲ್‌ಫೋನ್‌ ಕಳ್ಳತನ ಆಗಿತ್ತು. ಆ ಸಂಬಂಧ ಸುಮಾರು ಜನರು ದೂರು ನೀಡಿದ್ದು, 71 ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಕೃತ್ಯ ಎಸಗಿರೋದು ಹೊರ ರಾಜ್ಯದಿಂದ ಬಂದವರು. ಹೀಗಾಗಿ ಸಾರ್ವಜನಿಕರು ತಮ್ಮ ಮೊಬೈಲ್​​ ಸೇರಿದಂತೆ ಇನ್ನಿತರ ವಸ್ತುಗಳ ಬಗ್ಗೆ ಮ್ಯಾಚ್​​ ವೇಳೆ ಗಮನವಹಿಸಿ ಎಂದೂ ಸೀಮಾಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.

ಇದನ್ನೂ ಓದಿ : ಕನ್ನಡ ಸಿನಿಮಾ ಮೇಲೆ ರಶ್ಮಿಕಾಗೆ ದಿಢೀರ್ ಲವ್! ಪೋಸ್ಟ್​ನಲ್ಲಿ ಏನಿದೆ?

Btv Kannada
Author: Btv Kannada

Leave a Comment

Read More