RCB ಪಂದ್ಯ ಅಂದ್ರೆ ಬೆಂಗಳೂರಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಅದರಲ್ಲಿಯೂ RCB ಮತ್ತು CSK ನಡುವಿನ ಪಂದ್ಯವೆಂದರೆ ಅದರ ಕ್ರೇಜ್ ಹೆಚ್ಚಾಗಿಯೇ ಇರುತ್ತದೆ. RCB ಮತ್ತು CSK ರಣರೋಚಕ ಪಂದ್ಯಕ್ಕೆ ಈಗಾಗಲೇ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಐಪಿಎಲ್ ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿಗೆ ಬರುವುದು ಬೇಡ. ಒಂದೊಮ್ಮೆ ಅದಾಗಿಯೂ ಬಂದಲ್ಲಿ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಈ ಹಿಂದೆ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆದ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಅದೇ ರೀತಿ ನಾಳಿನ ಮ್ಯಾಚ್ ವೇಳೆಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ನಿರ್ಧಾರಗಳನ್ನ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ.
ಕಳೆದ ಮ್ಯಾಚ್ ಸಂದರ್ಭ ಆಗಮನ ಮತ್ತು ನಿರ್ಗಮನ ಸೇರಿ ಸುಮಾರು 32 ಸಾವಿರ ಜನ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ನಾಳಿನ ಪಂದ್ಯಕ್ಕೂ ಆಗಮಿಸಲಿರುವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳನ್ನೇ ಬಳಸಿ ಎಂದು ಕೇಳಿಕೊಳ್ಳೋದಾಗಿ ಅವರು ಹೇಳಿದ್ದಾರೆ.
ಕಳೆದ ಪಂದ್ಯದ ವೇಳೆ ಹಲವರ ಮೊಬೈಲ್ಫೋನ್ ಕಳ್ಳತನ ಆಗಿತ್ತು. ಆ ಸಂಬಂಧ ಸುಮಾರು ಜನರು ದೂರು ನೀಡಿದ್ದು, 71 ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಕೃತ್ಯ ಎಸಗಿರೋದು ಹೊರ ರಾಜ್ಯದಿಂದ ಬಂದವರು. ಹೀಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳ ಬಗ್ಗೆ ಮ್ಯಾಚ್ ವೇಳೆ ಗಮನವಹಿಸಿ ಎಂದೂ ಸೀಮಾಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.
ಇದನ್ನೂ ಓದಿ : ಕನ್ನಡ ಸಿನಿಮಾ ಮೇಲೆ ರಶ್ಮಿಕಾಗೆ ದಿಢೀರ್ ಲವ್! ಪೋಸ್ಟ್ನಲ್ಲಿ ಏನಿದೆ?









