ನನ್ನನ್ನು ಬೈದಿದ್ದಕ್ಕಾದರೂ ಡಿಕೆಶಿ ಬಾಲಕೃಷ್ಣಗೆ ಮಂತ್ರಿ ಸ್ಥಾನ ಕೊಡಿಸಲಿ – ಆರ್‌ ಅಶೋಕ್ ವ್ಯಂಗ್ಯ!

ಬೆಂಗಳೂರು : ಕಳೆದ ಮೂರು ವರ್ಷಗಳಿಂದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂದು ನಿರಂತರವಾಗಿ ವಕಾಲತ್ತು ವಹಿಸುತ್ತಾ, ಮಾಧ್ಯಮಗಳ ಮುಂದೆ ಒಂಟಿ ಕಣ್ಣಲ್ಲಿ ಕಣ್ಣೀರು ಸುರಿಸುತ್ತಿದ್ದ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಇತ್ತೀಚಿನ ನಡವಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.

ಸಚಿವ ಸ್ಥಾನ ಸಿಗದೇ ಇರುವ ಹತಾಶೆಯಿಂದ ಬಾಲಕೃಷ್ಣ ಅವರು ಈಗ ವಿರೋಧ ಪಕ್ಷದ ನಾಯಕರನ್ನು ನಿಂದಿಸಲು ಶುರು ಮಾಡಿದ್ದಾರೆ. ಹಾಗಾಗಿ ಇದೀಗ ವಿಪಕ್ಷ ನಾಯಕ ಆರ್ ಅಶೋಕ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಬಾಲಕೃಷ್ಣ ವಿರುದ್ಧ ಕಿಡಿ ಕಾರಿದ್ದಾರೆ.

ನನ್ನನ್ನು ಬೈದರೆ, ತೇಜೋವಧೆ ಮಾಡಿದರೆ ಮಂತ್ರಿ ಸ್ಥಾನ ಸಿಗಬಹುದು ಎನ್ನುವ ಆಸೆಯಿಂದ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ ಎಂದು ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.

ಮೂರು ವರ್ಷಗಳ ನಿರಂತರ ಅಚಲ ಸ್ವಾಮಿನಿಷ್ಠೆಗಾಗಿ ಅಲ್ಲದಿದ್ದರೂ, ಕನಿಷ್ಠ ನನ್ನನ್ನು ಬೈದಿದ್ದಕ್ಕಾದರೂ ಡಿ.ಕೆ ಶಿವಕುಮಾರ್ ಅವರು ಬಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಕೊಡಿಸಲಿ ಎಂದು ಆಶಿಸುತ್ತೇನೆ. ಮಂತ್ರಿ ಸ್ಥಾನ ಸಿಕ್ಕಮೇಲಾದರೂ ಆ ಮಾಗಡಿ ರಂಗನಾಥ ಸ್ವಾಮಿ ಬಾಲಕೃಷ್ಣ ಅವರಿಗೆ ಸದ್ಬುದ್ಧಿ ಕೊಡಲಿ, ಆಚಾರವಿಲ್ಲದ ಅವರ ನಾಲಿಗೆಗೆ ಸ್ವಲ್ಪ ಸದಾಚಾರ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆ ಯಾತ್ರೆಗೆ ಹೊರಟ ಹೆಚ್​ಡಿ ಕುಮಾರಸ್ವಾಮಿ!

Btv Kannada
Author: Btv Kannada

Leave a Comment

Read More